ಹಿರೀಸಾವೆ ಹೋಬಳಿ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವದಲ್ಲಿ ಡಿ.ಆರ್. ಮಂಜುನಾಥ್ ಮಾತನಾಡಿದರು. ಶಾಂತಮ್ಮ, ಮಂಜಮ್ಮ ಇದ್ದರು. 
ಜಿಲ್ಲೆ

ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ

ಹಿರೀಸಾವೆ: ದುಡಿದ ಹಣವನ್ನು ಕೂಡಿಟ್ಟು ಅಥವಾ ಅದರಿಂದ ಆಸ್ತಿ ಸಂಪಾದಿಸುವ ಬದಲು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸುವುದು ಸೂಕ್ತ ಎಂದು ದಿಡಗ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಆರ್.ಮಂಜುನಾಥ್ ಹೇಳಿದರು.

ಹೋಬಳಿಯ ಪುರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಹೆಚ್ಚಿನ ಹಣ ಖರ್ಚು ಮಾಡಿ ತಮ್ಮ ಮಕ್ಕಳನ್ನು ಯಾವುದೋ ಒಂದು ಶಾಲೆಗೆ ಸೇರಿಸಿದರೆ ಸಾಕು. ನಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುವ ಪಾಲಕರೇ ಹೆಚ್ಚಾಗಿದ್ದಾರೆ. ಮಕ್ಕಳ ಶೈಕ್ಷಣಿಕ ಹಂತದಲ್ಲಿ ಪಾಲಕರ ಜವಾಬ್ದಾರಿ ಹಾಗೂ ಕರ್ತವ್ಯಗಳು ಸಾಕಷ್ಟಿವೆ ಎಂದು ತಿಳಿಸಿದರು.

ಶಾಲೆಯಲ್ಲಿ ಶಿಕ್ಷಕರು ನೀಡುವ ಮೌಲ್ಯಯುತ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ಉತ್ತಮ ಸಂಸ್ಕಾರ ಕಲಿಸಬೇಕು. ತಾವು ನಡೆದುಕೊಳ್ಳುವ ಒಳ್ಳೆಯ ರೀತಿ, ನೀತಿಗಳು ಮಕ್ಕಳಿಗೆ ದಾರಿದೀಪವಾಗಲಿದೆ ಎಂದು ಸಲಹೆ ನೀಡಿದರು.

ಈಗಾಗಲೇ ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳ ಭವಿಷ್ಯದ ಸಲುವಾಗಿ ಹೆಚ್ಚಿನ ಜವಾಬ್ದಾರಿ ಹಾಗೂ ಕಾಳಜಿ ವಹಿಸಬೇಕಿದೆ. ಟಿವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯಿಂದ ಪಾಲಕರು ಸಹ ದೂರವಿದ್ದು, ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ  ವಹಿಸಬೇಕು ಎಂದು ಮನವಿ ಮಾಡಿದರು.

ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪಾರ್ವತಮ್ಮ, ಅಂಗನವಾಡಿ ಮೇಲ್ವಿಚಾರಕಿ ಮಮತಾ, ಶಾಲಾ ಮುಖ್ಯಶಿಕ್ಷಕಿ ಶಾಂತಮ್ಮ, ಅಂಗನವಾಡಿ ಕಾರ್ಯಕರ್ತೆ ಎಚ್.ಜಿ. ಮಂಜಮ್ಮ, ಗ್ರಾಮದ ಎಲ್ಲ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.