ಜಿಲ್ಲೆ

ಮಕ್ಕಳಿಗೆ ಸಂಸ್ಕಾರ, ವಿವೇಕಯುತ ಶಿಕ್ಷಣ ನೀಡಿ

 ಸರ್ವೋದಯ ಕಾಲೇಜು ಪ್ರಾಂಶುಪಾಲ ಟಿ.ಎನ್.ರಾಮಪ್ಪ ಮನವಿ / ವಿವೇಕಾನಂದ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಸರ್ವೋದಯ ಕಾಲೇಜು ಪ್ರಾಂಶುಪಾಲ ಟಿ.ಎನ್.ರಾಮಪ್ಪ ಹೇಳಿದರು.

ನಗರದ ವಿವೇಕಾನಂದ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ,ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಸಂಸ್ಕಾರ ಹಾಗೂ ವಿವೇಕವನ್ನು ಒಳಗೊಂಡ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.

ವೇದಬ್ರಹ್ಮ ಸುಬ್ರಮಣ್ಯಸ್ವಾಮಿ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ. ಜನನಿ ತಾನೇ ಮೊದಲ ಗುರುವು ಎಂಬ ಮಾತಿನಂತೆ ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿಯ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಅವರ ಕೈಯಿಂದಲೇ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ ಎಂದರು.

ಕಾರ್ಯದರ್ಶಿ ಸಿ.ಎನ್. ನಂಜೇಗೌಡ ಮಾತನಾಡಿ, ಸಾಮಾನ್ಯವಾಗಿ ಪಾಲಕರು ಮಕ್ಕಳನ್ನು ಪುಣ್ಯ ಕ್ಷೇತ್ರಗಳಿಗೆ ಕರೆದೊಯ್ದು ಅಕ್ಷರಾಭ್ಯಾಸ ಮಾಡಿಸುತ್ತಾರೆ. ಆದರೆ, ಎಲ್ಲ ಪಾಲಕರು ಪುಣ್ಯ ಕ್ಷೇತ್ರಗಳಿಗೆ ಹೋಗಿ ಬರುವುದು ಕಷ್ಟ. ಇದನ್ನು ಅರಿತು ಶಾಲೆಯಲ್ಲಿಯೇ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮುಖ್ಯ ಶಿಕ್ಷಕಿ ಯಶೋದಮ್ಮ, ಸಂಯೋಜಕ ವರದರಾಜ, ಶಿಕ್ಷಕರಾದ ಅನಿತಾ, ರಜಿನಿ, ಶಾರದಾ, ಕಮಲ್, ದಿನೇಶ್, ಹರೀಶ್, ಸುಬ್ರಹ್ಮಣ್ಯ ಸ್ವಾಮಿ, ಹರೀಶ್ ಸ್ವಾಮಿ ಇತರರು ಇದ್ದರು.