ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಸಿ.ಸಿ.ಪಾಟೀಲ ಸೋಮವಾರ ಭೂಮಿಪೂಜೆ ನೆರವೇರಿಸಿದರು. ಮುತ್ತು ರಾಯರಡ್ಡಿ, ಡಾ.ಸಿ.ಕೆ. ರಾಚನಗೌಡ್ರ, ಆರ್.ಬಿ. ಕುರ್ತಕೋಟಿ, ಎಸ್.ವಿ. ದಂಡನಾಯ್ಕರ, ಅನ್ನಪೂರ್ಣ ಇದ್ದರು. 
ಜಿಲ್ಲೆ

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ

ನರಗುಂದ: ಶಿಕ್ಷಕರು ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣವನ್ನು ಕಲಿಸಿಕೊಡಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ಸದ್ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 151.20 ಲಕ್ಷ ರೂ. ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಕೊಠಡಿಗಳ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಸರ್ಕಾರ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಶೂ, ಸಾಕ್ಸ್, ಸಮವಸ್ತ್ರ, ಪಠ್ಯ-ಪುಸ್ತಕ, ಮಧ್ಯಾಹ್ನದ ಬಿಸಿಯೂಟ ಸೇರಿ ಹಲವಾರು ಯೋಜನೆಗಳಿಗೆ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿತಿರುವ ಸರ್.ಎಂ. ವಿಶ್ವೇಶ್ವರಯ್ಯ, ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತೆ ನಮ್ಮ ದೇಶಕ್ಕೆ ಕೀರ್ತಿ ತರಬೇಕು ಎಂದರು.

ನಾನು ಕೇವಲ ಎಸ್ಸೆಸ್ಸೆಲ್ಸಿ ಕಲಿತಿದ್ದರೂ ಕನ್ನಡ ಮಾಧ್ಯಮದ ಜ್ಞಾನಾರ್ಜನೆಯಿಂದ ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಅತ್ಯಂತ ನಿರರ್ಗಳವಾಗಿ ಮಾತನಾಡುತ್ತೇನೆ. ಅಲ್ಲದೆ ಅವುಗಳನ್ನು ಭಾಷಾಂತರ ಮಾಡಿ ಹೇಳುತ್ತೇನೆ ಎಂದು ಮ್ಕಕಳಿಗೆ ಪ್ರೋತ್ಸಾಹ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಗುರುನಾಥ ಹೂಗಾರ ಮಾತನಾಡಿ, ಭಾರತ ಸರ್ಕಾರ 15 ವರ್ಷದ ಶಾಲಾ ಶಿಕ್ಷಣವನ್ನು ಒಂದೇ ಸೂರಿನಡಿ ಕಡ್ಡಾಯ ಹಾಗೂ ಉಚಿತ, ಸಾರ್ವತ್ರಿಕಗೊಳಿಸಿದೆ. ವಿದ್ಯಾರ್ಥಿಗಳ ನಿಜವಾದ ಹಣೆಬರಹ ಶಾಲಾ ಕೊಠಡಿಯಲ್ಲಿ ನಿರ್ಮಾಣಗೊಳ್ಳುತ್ತದೆ. ಸರ್ಕಾರಿ ಸೌಲಭ್ಯಗಳ ಜತೆಗೆ ಶಿಕ್ಷಕರು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿಕೊಡುತ್ತಿದ್ದಾರೆ. ಶಿಕ್ಷಕರ ಬಳಿ 6 ಗಂಟೆ ಕಾಲ ಕಳೆಯುವ ಮಗು ಇನ್ನುಳಿದ 18 ಗಂಟೆ ಪೋಷಕರ ಬಳಿ ಇರುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಶರಣಬಸಪ್ಪ ಹಳೇಮನಿ, ಪ್ರಾಚಾರ್ಯ ಎಸ್.ವಿ. ದಂಡನಾಯ್ಕರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಮರೆಯಪ್ಪನವರ, ಮುತ್ತು ರಾಯರಡ್ಡಿ, ದೇಸಾಯಿಗೌಡ ಪಾಟೀಲ, ರುದ್ರಗೌಡ ರಾಚನಗೌಡ್ರ, ಶ್ರುತಿ ಬ್ಯಾಳಿ, ಎ.ಐ. ತೇಲಿ, ಶೋಭಾ ಕೋನಣ್ಣವರ, ಮಂಜುಳಾ ಚಿನ್ನಪ್ಪಗೌಡ್ರ, ಶ್ರೀಮತಿ ಭೋಗಾರ, ಸುವರ್ಣಾ ಬೆಳಗಲಿ, ಆರ್.ಬಿ. ಕುರ್ತಕೋಟಿ, ಎಸ್.ಬಿ. ಹಂಗರಗಿ. ಡಾ.ಸಿ.ಕೆ. ರಾಚನಗೌಡ್ರ, ಸತೀಶ ನಾಗನೂರ, ಚನ್ನಪ್ಪ ಹಳೇಮನಿ, ಎ.ಪಿ. ಜ್ಞಾನೋಪಂಥ, ಎಂ.ಎಸ್. ತೋರಗಲ್, ಬಿ.ಎಸ್. ಪಾಟೀಲ, ಎಂ.ಐ. ಮೇಟಿ, ಅನಿಲ ಧರೆಯನ್ನವರ ಇತರರಿದ್ದರು. ಬಸವರಾಜ ತಳವಾರ ನಿರ್ವಹಿಸಿದರು.