ಕವಿತಾಳ: ಕೆ.ತಿಮ್ಮಪೂರ ಗ್ರಾಮದಲ್ಲಿ ವಿಷಾಹಾರ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದರು.
ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ 5 ಸಾವಿರ ರೂ. ಸಹಾಯಧನ ನೀಡಿ ಮಾತನಾಡಿದರು. ಕೃಷಿ ಇಲಾಖೆ, ಗ್ರಾಪಂ ಅಧಿಕಾರಿಗಳು ರೈತರ ಬಗ್ಗೆ ಗಮನ ಹರಿಸದ ಕಾರಣ ಇಂತಹ ಘಟನೆಗಳು ನಡೆಯುತ್ತಿವೆ.
ಕೃಷಿ ಇಲಾಖೆಯವರು ರೈತರು ಬೆಳೆಯುವ ಬೆಳೆ ಬಗ್ಗೆ ಗಮನಹರಿಸಿ ಅರಿವು ಮೂಡಿಸಬೇಕು. ಕ್ರಿಮಿನಾಶಕ ಔಷಧ ಹೊಡೆದ ಪಲ್ಯ ತಿಂದು ತಂದೆ, ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದರು. ಪ್ರಾಣಾಪಾಯದಿಂದ ತಾಯಿ, ಇನ್ನಿಬ್ಬರ ಮಕ್ಕಳಿಗೆ ಸರ್ಕಾರ ಚಿಕಿತ್ಸೆಯೊಂದಿಗೆ ಸೂಕ್ತ ಪರಿಹಾರ ನಿಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಾಜಶೇಖರ ತೊಪ್ಪಲದೊಡ್ಡಿ, ಹನುಮಂತ ಬುಳ್ಳಪುರ, ಖಾಜಾಪಾಷಾ ಬ್ಯಾಗವಾಟ, ನಿಂಗಪ್ಪ ತೊಪ್ಪಲದೊಡ್ಡಿ, ರಮೇಶ ಕ್ಯಾಂಪ್, ಶಿವರಾಜ ಮ್ಯಾಗಳಮನಿ ಇತರರಿದ್ದರು.