ಹೊಳೆಹೊನ್ನೂರಿನ ಮೆಸ್ಕಾಂ ಎಇಇ ಬಳಿ ಹೆಚ್ಚುವರಿ ವಿದ್ಯುತ್ ನೀಡುವಂತೆ ಎಮ್ಮೆಹಟ್ಟಿ ಭಾಗದ ರೈತರು ಮನವಿ ಮಾಡಿದರು. ಯು.ಬಸವರಾಜ್, ಆರ್.ಉಮೇಶ್, ಪರುಶುರಾಮ್‌ರಾವ್, ನಾಗರಾಜ್ ಇತರರಿದ್ದರು.  
ಜಿಲ್ಲೆ

ಭದ್ರೆ ನೀರು ಬರುತ್ತಿಲ್ಲ; ಐಪಿ ಸೆಟ್‌ಗಳಿಗೆ ಹೆಚ್ಚುವರಿ ವಿದ್ಯುತ್ ನೀಡಿ

Shivamogga - Desk - Vinayakumar D B

ಹೊಳೆಹೊನ್ನೂರು: ನಾಲೆಯ ಕೊನೆಯ ಭಾಗಕ್ಕೆ ಭದ್ರೆ ನೀರು ಬರುತ್ತಿಲ್ಲ. ನೀರಿನ ಮೂಲಗಳಿಂದ ನೀರು ಹರಿಸೋಣ ಎಂದರೆ ಸರಿಯಾಗಿ ಕರೆಂಟ್ ಕೂಡ ಇರಲ್ಲ ಎಂದು ಎಮ್ಮೆಹಟ್ಟಿ ಭಾಗದ ನಾಲೆ ಹಂಚಿನ ಕೆಲ ರೈತರು ಹೊಳೆಹೊನ್ನೂರು ಮೆಸ್ಕಾಂ ಎಇಇ ಬಳಿ ಹೆಚ್ಚುವರಿಯಾಗಿ ಐಪಿ ಸೆಟ್‌ಗಳಿಗೆ ಒಂದು ವಾರದವರೆಗೆ ವಿದ್ಯುತ್ ನೀಡುವಂತೆ ಮನವಿ ಮಾಡಿದರು.

ಭದ್ರ ನಾಲೆ ನೀರು ಇನ್ನೆರಡು ದಿನಗಳಲ್ಲಿ ಬಂದ್ ಆಗಲಿದೆ. ನೀರು ಕೊನೆಯ ಭಾಗಕ್ಕೆ ತಲುಪುತ್ತಿಲ್ಲ. ನೀರು ಹರಿಯುವಾಗ ನದಿ ಹಾಗೂ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿರುತ್ತದೆ. ನೀಡುತ್ತಿರುವ ಅರೆ ಬರೆ ಕರೆಂಟ್‌ನಲ್ಲಿ ನೀರುಣಿಸಿ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾಲೆಯ ಕೊನೆಯ ಭಾಗಕ್ಕೆ ನೀರು ಕಳಿಸುವ ವಿಚಾರದಲ್ಲಿ ನೀರಾವರಿ ಅಧಿಕಾರಿಗಳು ಕೈಚೆಲ್ಲಿ ಕುಳಿತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ಕ-ಪಕ್ಕದ ಜಮೀನಿನ ಕೊಳವೆಬಾವಿಗಳಿಂದ ನೀರು ಬಿಟ್ಟುಕೊಳ್ಳಲು ಕರೆಂಟ್ ಇರುವುದಿಲ್ಲ. ಸರ್ಕಾರ ನೀಡುವ 7 ಗಂಟೆ ನಿರಂತರ ವಿದ್ಯುತ್ ಹೆಸರಿಗೆ ಮಾತ್ರ ಎನ್ನುವಂತಾಗಿದೆ. 7 ಗಂಟೆಯಲ್ಲಿ 4-5 ಗಂಟೆ ವಿದ್ಯುತ್ ಸಿಕ್ಕರೆ ಹೆಚ್ಚು ಎನ್ನಬಹುದು. ಗೊಂದಿ ನಾಲೆ ಆಶ್ರಿತ ಎಮ್ಮೆಹಟ್ಟಿ, ಅಗಸನಹಳ್ಳಿ ಭಾಗದ ರೈತರಿಗೆ ಈ ಬಾರಿ ನಾಲೆಯ ನೀರು ಲಭ್ಯವಿರದ ಕಾರಣ ತೋಟಗಳಿಗೆ ನೀರುಣಿಸಲು ವಿದ್ಯುತ್ ಮೇಲೆ ಅವಲಂಬಿತವಾಗಬೇಕಿದೆ. ಆದರಿಂದ ಅಧಿಕಾರಿಗಳು ಒಂದು ವಾರದ ಮಟ್ಟಿಗಾದರು ಹೆಚ್ಚುವರಿಯಾಗಿ ಕರೆಂಟ್ ನೀಡಬೇಕೆಂದು ಮನವಿ ಮಾಡಿದರು.
ರೈತರೊಂದಿಗೆ ಮಾತನಾಡಿದ ಮೆಸ್ಕಾಂ ಎಇಇ ಚಂದ್ರಪ್ಪ, ಐಪಿ ಸೆಟ್‌ಗಳಿಗೆ 7 ಗಂಟೆ ತ್ರೀ ಪೇಸ್ ವಿದ್ಯುತ್ ನೀಡಲಾಗುತ್ತಿದೆ. ವ್ಯತ್ಯಾಯವಾದ ಕರೆಂಟ್‌ನ್ನು ಮುಂದಿನ ದಿನ ಹೆಚ್ಚುವರಿಯಾಗಿ ನೀಡಿ ಸರಿ ಪಡಿಸಲಾಗುತ್ತಿದೆ. ಸಕಾಲದಲ್ಲಿ ಲೈನ್‌ಮನ್‌ಗಳನ್ನು ಕಳಿಸಿ ರೈತರ ಸಂಕಷ್ಟಕ್ಕೆ ತಕ್ಷಣದಲ್ಲಿ ಸ್ಪಂದನೆ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಕರೆಂಟ್ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅನುಮತಿ ಸಿಗುತ್ತಿದ್ದಂತೆ ಹೆಚ್ಚುವರಿ ವಿದ್ಯುತ್ ಒದಗಿಸಲಾಗುವುದು ಎಂದರು.
ರೈತರಾದ ಯು.ಬಸವರಾಜ್, ಆರ್.ಉಮೇಶ್, ಪರುಶುರಾಮ್ ರಾವ್, ನಾಗರಾಜ್, ಮಂಜುನಾಥ, ದೇವೋಜಿರಾವ್, ಬೈರನಹಳ್ಳಿ ನಾಗರಾಜ್ ಇತರರಿದ್ದರು.