ಜಿಲ್ಲೆ

ಗ್ಯಾರಂಟಿ ಸವಲತ್ತು ಬಾರದವರ ಪಟ್ಟಿ ನೀಡಿ

ಎನ್.ಆರ್.ಪುರ: ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳು ಸಮರ್ಪಕವಾಗಿ ಬರದಿದ್ದರೆ ಅಂತವರ ಪಟ್ಟಿ ನೀಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಸದಸ್ಯರ ಅಭಿಪ್ರಾಯದಂತೆ ಮುಂದಿನ ತಿಂಗಳಿಂದ ಪ್ರತಿ ತಿಂಗಳ 3ನೇಮಂಗಳವಾರ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಕರೆಯಲಾಗುವುದು ಎಂದರು.

ಆಹಾರ ನಿರೀಕ್ಷಕ ಗಣಪತಿ ಮಾಹಿತಿ ನೀಡಿ, ಅನ್ನ ಭಾಗ್ಯ ಯೋಜನೆಗೆ 2023ರ ಜುಲೈನಿಂದ 2024ರ ಆಗಸ್ಟ್ ತಿಂಗಳವರೆಗೆ ಅನುದಾನ ಬಿಡುಗಡೆಯಾಗಿದೆ. ಅಂತ್ಯೋದಯ ಕಾರ್ಡ್‌ದಾರರ ಆಧಾರ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ರೇಷನ್ ಕಾರ್ಡ್‌ಗೂ ಮ್ಯಾಪ್ ಆಗದೆ ಇರುವುವರಿಗೆ ಅನುದಾನ ಬಿಡಗಡೆಯಾಗುತ್ತಿಲ್ಲ. ಮ್ಯಾಚಿಂಗ್ ಮಾಡಿದಲ್ಲಿ ಅನುದಾನ ಬರುತ್ತದೆ. ವಯೋವೃದ್ಧರು ಒಬ್ಬರೇ ಇದ್ದಲ್ಲಿ ಅವರ ಹೆಬ್ಬೆಟ್ಟು ಯಂತ್ರದಲ್ಲಿ ಬರದಿದ್ದರೆ ಅಂತವರನ್ನು ಅವರ ಮಕ್ಕಳ ಕಾರ್ಡ್‌ಗೆ ಸೇರಿಸಬೇಕು ಎಂದರು.

ಮೆಸ್ಕಾಂ ಇಲಾಖೆ ಜೆಇ ಪ್ರಶಾಂತ್ ಮಾಹಿತಿ ನೀಡಿ, 20,681 ಫಲಾನುಭವಿಗಳು ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು. ಗ್ಯಾರಂಟಿ ಯೋಜನೆ ಅನುಸ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಮಾತನಾಡಿ,ಬಾಡಿಗೆ ಮನೆಯವರು ಮತ್ತೊಂದು ಮನೆಗೆ ಬದಲಾಯಿಸಿದರೆ ಅಂತವರಿಗೂ ಗೃಹಜ್ಯೋತಿ ಸೌಲಭ್ಯ ಸಿಗಬೇಕು. ಜನಸ್ಪಂದನ, ಗ್ರಾಮ ಸ್ಪಂದನ ಕಾರ್ಯಕ್ರಮಗಳಿಗೆ ಗ್ಯಾರಂಟಿ ಅನುಷ್ಠಾನ ಸಮಿತಿಯವರನ್ನೂ ಆಹ್ವಾನಿಸಬೇಕು ಎಂದು ಸೂಚಿಸಿದರು.