ಜಿಲ್ಲೆ

ಸರ್ಕಾರಿ ಶಾಲೆಗೆ ಶೀಘ್ರ 2 ಗುಂಟೆ ಜಾಗ ನೀಡಿ

ಹಳಿಯಾಳ: ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ಕ್ಕೆ ಹೆಚ್ಚುವರಿಯಾಗಿ 2 ಕೊಠಡಿಗಳ ನಿರ್ವಣಕ್ಕೆ ಪುರಸಭೆಯು ನೀಡಬೇಕಾಗಿರುವ 2 ಗುಂಟೆ ಜಮೀನನ್ನು ಕೂಡಲೇ ಶಾಲೆಯ ಹೆಸರಿಗೆ ನೋಂದಾಯಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಪುರಸಭೆಯನ್ನು ಆಗ್ರಹಿಸಿದೆ.

ಕರವೇ ಪದಾಧಿಕಾರಿಗಳು ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ ನೇತೃತ್ವದಲ್ಲಿ ಸೋಮವಾರ ಪುರಸಭೆಗೆ ಆಗಮಿಸಿ ಮುಖ್ಯಾಧಿಕಾರಿ ಅಶೋಕ ಸಾಳೆನ್ನವರಗೆ ಲಿಖಿತ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಫಲವಾಗಿ ಶಾಲೆಗೆ ಹೆಚ್ಚುವರಿಯಾಗಿ ಕೊಠಡಿಗಳ ನಿರ್ವಣಕ್ಕಾಗಿ 2 ಗುಂಟೆ ಜಾಗವನ್ನು ಸಿಟಿಎಸ್ ನಂ. 2191ರಲ್ಲಿ ಬಿಟ್ಟುಕೊಡುವ ನಿರ್ಣಯ ಮಾಡಿದ್ದು ಸಂತೋಷಕರ ಸಂಗತಿ. ಸದರಿ 2 ಗುಂಟೆ ಜಾಗವನ್ನು ಆದಷ್ಟು ಬೇಗ ಗುರುತಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಭೂಮಾಪನ ಇಲಾಖೆಯ ಹಳಿಯಾಳದ ಎಡಿಎಲ್​ಆರ್ ಸಿ.ಟಿ. ಸರ್ವೆಯವರಿಗೆ ಪುರಸಭೆಯು ತಿಳಿಸಿದಂತೆ ಸಿ.ಟಿ. ಸರ್ವೆ ಕಚೇರಿಯಿಂದ ಅಳತೆ ಮಾಡಿ ಸ್ಕೆಚ್ ತಯಾರಿಸಿ ಈಗಾಗಲೇ ಪುರಸಭೆಗೆ ಸಲ್ಲಿಸಿದ್ದಾರೆ.

ಸರ್ವೆಯಾಗಿ ತಿಂಗಳುಗಳೇ ಕಳೆದರೂ ಈ ಬಗ್ಗೆ ಯಾವುದೇ ಕ್ರಮ ಜರುಗಿಲ್ಲ. ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಉಪಾಧ್ಯಕ್ಷ ಚಂದ್ರಕಾಂತ ದುರ್ವೆ, ಕಾರ್ಯದರ್ಶಿ ಮಹೇಶ ಆನೆಗುಂದಿ, ಪ್ರಮುಖರಾದ ಸುರೇಶ ಕೋಕಿತಕರ ರಾಮಾ ಜಾವಳೆಕರ, ಸುಧಾಕರ ಕುಂಬಾರ, ನಾಗೇಶ ಹೆಗಡೆ,ಪರಶುರಾಮ ಶಾಪುರಕರ,ಶಿವು ಡಮ್ಮಣಗಿಮಠ, ಲಕ್ಷ್ಮಣ ಪೆಡ್ನೆಕರ, ನಂದು ಕರಂಜಿಕರ, ತಿಪ್ಪಣ್ಣ ಕಲಗುಡಿ, ರಾಜು ನಾಯ್ಕ ಇತರರಿದ್ದರು.