ಹರಪನಹಳ್ಳಿಯಲ್ಲಿ ಅಲೆಮಾರಿ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು. ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯಾಧ್ಯಕ್ಷ ವಿ.ಸಣ್ಣ ಅಜ್ಜಯ್ಯ, ಸಿಂದೋಳ ಸಮುದಾಯದ ದುರುಗೇಶ, ಹಂಡಿ ಜೋಗಿ, ಮೇದಾರ, ಚೆನ್ನದಾಸ, ಸಿಳ್ಳೆಕ್ಯಾತ, ಗೋಸಂಗಿ, ಡೊಂಬರ, ಸುಡಗಾಡು ಸಿದ್ದರ ಸಮುದಾಯಗಳ ಮುಖಂಡರು, ಕಾರ್ಯಕರ್ತರು ಇದ್ದರು. 
ಜಿಲ್ಲೆ

ಅಲೆಮಾರಿಗಳಿಗೆ ಶೇ.1 ಒಳಮೀಸಲಾತಿ ನೀಡಿ

ಗಾಯತ್ರಿ ಮಾಲಿಪಾಟೀಲ್

ಹರಪನಹಳ್ಳಿ: ರಾಜ್ಯ ಸರ್ಕಾರ ಇತ್ತೀಚೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಅಲೆಮಾರಿಗಳ ಸಮುದಾಯ ಶನಿವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಮನವಿ ಸಲ್ಲಿಸಿತು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ ಕೆಲ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಒಳಮೀಸಲಾತಿ ಜಾರಿಗೊಳಿಸುವ ಒತ್ತಡವಿದ್ದ ಹಿನ್ನಲೆ 101ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿದ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಎಚ್ಚರಿಕೆಯಿಂದ ಮೀಸಲಾತಿ ನಿಗದಿ ಪಡಿಸಬೇಕಿದ್ದ ಸರ್ಕಾರ, ಅಲೆಮಾರಿ ಸಮುದಾಯಕ್ಕೆ ಮರಣ ಶಾಸನ ಬರೆದಿದೆ. ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳ ಜತೆ ಅಲೆಮಾರಿ ಸಮುದಾಯಕ್ಕೆ ಶೇ.5 ಮೀಸಲಾತಿ ನೀಡಿದ್ದು, ಮೀಸಲಾತಿಯಿಂದ ಶಾಶ್ವತವಾಗಿ ವಂಚಿಸಲಾಗಿದೆ. ಅಲೆಮಾರಿ ಸಮುದಾಯಗಳಿಗೆ ಸ್ವಾತಂತ್ರ್ಯ ನಂತರ ಸಂವಿಧಾನಬದ್ಧ ಸೌಲಭ್ಯಗಳು ದೊರೆತಿಲ್ಲ, ಗುಡಿ-ಗುಂಡಾರ, ಕೌದಿ ಜೋಪಡಿಗಳಲ್ಲಿ ಕುಲಕಸಬು ಮಾಡುತ್ತಾ ಅಸ್ಪಶ್ಯರಾಗಿಯೇ ಉಳಿದಿದ್ದು, ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ನ್ಯಾ.ಡಾ.ಎಚ್.ಎಸ್.ನಾಗಮೋಹನದಾಸ್ ಏಕಸದಸ್ಯ ಆಯೋಗದ ಶಿಫಾರಸಿನಂತೆ 59 ಸೂಕ್ಷ್ಮ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ (ಎ)ಗೆ ಸೇರಿಸಿ ಶೇ.1ಒಳ ಮೀಸಲಾತಿ ನೀಡಿದರೂ ಆದ್ಯತೆ ನೀಡಿದಂತಾಗುತ್ತಿತ್ತು. ಆದ್ದರಿಂದ ಅಲೆಮಾರಿ ಸಮುದಾಯಗಳಿಗೆ ಶೇ.1 ಒಳಮೀಸಲಾತಿ ನೀಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.