ಹುಬ್ಬಳ್ಳಿ: ಜಗತ್ತಿನಲ್ಲಿ ಎಷ್ಟು ಭಾಷೆಗಳಿವೆಯೋ ಅವೆಲ್ಲಕ್ಕಿಂತ ಮೊದಲು ಹುಟ್ಟಿದ ಸಂಸ್ಕೃತವು ಭಗವಂತನು ಸ್ವತಃ ಬಳಸಿ ಭೂಮಿಗೆ ಕಳುಹಿಸಿದ ಭಾಷೆಯಾಗಿದೆ. ಸಂಸ್ಕೃತಿ, ಸಂಸ್ಕಾರ, ಜ್ಞಾನದ ಭಂಡಾರವಾಗಿರುವ ಇದು ಮಧುರವಾದದ್ದು, ಪಠಣ ಮಾಡಿದರೆ ಜ್ಞಾನ ವೃದ್ಧಿಯಾಗುತ್ತದೆ, ಅಂತಃಕರಣವು ಶುದ್ಧಿಯಾಗುತ್ತದೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಯ ದೇಶಪಾಂಡೆನಗರದ ಕರ್ನಾಟಕ ಜಿಮಖಾನಾ ಮೈದಾನದಲ್ಲಿ ಸಂಸ್ಕೃತ ಭಾರತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಗೀತಾಮೃತಮ್ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೆಲ ಎಡಪಂಥಿಯರು, ಭಾಷಾಂಧರು ಲ್ಯಾಟಿನ್, ಜರ್ಮನ್, ಇಂಗ್ಲಿಷ ಮುಂತಾದ ಭಾಷೆಗಳನ್ನು ಪ್ರೀತಿಸುತ್ತಾರೆ ಆದರೆ, ಸಂಸ್ಕೃತವನ್ನು ದ್ವೇಷ ಮಾಡುತ್ತಾರೆ. ಆದರೆ, ಜಗತ್ತಿನಲ್ಲಿ ಸೌಹಾರ್ದತೆ ಬೆಳೆಸಿದ ಭಾಷೆ ಇದಾಗಿದೆ. ಒಳ್ಳೆಯದನ್ನು ಸ್ವೀಕಾರ ಮಾಡುವ ಮನೋಭಾವ ಬೆಳೆಸಿದೆ. ಮೊದಲು ಸಂಸ್ಕೃತವನ್ನು ಕಲಿತು ಭಗವದ್ಗೀತೆಯಲ್ಲಿನ ಸಾರ ಅರ್ಥ ಮಾಡಿಕೊಂಡು ಆಮೇಲೆಯೂ ದ್ವೇಷ ಮಾಡಬೇಕು ಎನಿಸಿದರೆ ಮಾಡಬಹುದು ಎಂದು ಸೂಚ್ಯವಾಗಿ ಹೇಳಿದರು.
ಕೆಲವರು ಹೇಗಾದರೂ ಮಾಡಿ ಸಂಸತವನ್ನು ಸಾಯಿಸಬೇಕು ಎಂದು ಹೊರಟಿದ್ದಾರೆ. ಆದರೆ, ಇದು ಸಾಧ್ಯವಿಲ್ಲ. ದೇವ ಭಾಷೆಯಾದ ಸಂಸ್ಕೃತಕ್ಕೆ ಸಾವಿಲ್ಲ. ಅದು ನಿರಂತರವಾಗಿ ಉಳಿಯಲಿದೆ. ಜಗತ್ತಿಗೆ ಜ್ಞಾನದ ರಾಶಿಯನ್ನು ಕೊಟ್ಟಂತಹ ಭಾಷೆಯನ್ನು ಮೊದಲು ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು.
ಅದ್ಭುತ ಭಾಷೆ: ಭಾರತೀಯರ ಮೇಲೆ ಪಾಶ್ಚಾತ್ಯ ಸಂಸ್ಕೃತಿ ಹೇರುವ ಕೆಲಸ ನಡೆಯುತ್ತಿರುವಾಗಲೇ ಸಂಸತ ಭಾರತೀ ವತಿಯಿಂದ ಇಂತಹ ಕಾರ್ಯಕ್ರಮ ಏರ್ಪಾಟಾಗಿರುವುದು ಅತ್ಯಂತ ಸೂಕ್ತವಾಗಿದೆ. ಜಗತ್ತಿನ ಎಲ್ಲ ಕಡೆ ಸನಾತನ ಧರ್ಮ ಮತ್ತು ಸಂಸ್ಕೃತ ಭಾಷೆಯನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ಭಗವದ್ಗೀತೆಯು ಮನುಷ್ಯ ಜೀವನದ ಪ್ರತಿ ಕ್ಷಣವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ತಿಳಿಸುತ್ತದೆ. ಗೀತೆಯನ್ನು ಭಾರತದ ಪಾರಿಜಾತ ಎಂದು ಕರೆಯಲಾಗುತ್ತದೆ. ಅದ್ಬುತವಾದ ಸಂಸ್ಕೃತ ಭಾಷೆ ಉಳಿಸಿ, ಬೆಳೆಸಲು ದೇಶದ ಪ್ರತಿಯೊಬ್ಬ ಪ್ರಜೆಯು ಶ್ರಮಿಸಬೇಕು ಎಂದರು.
ಸಂಸ್ಕೃತ ಭಾರತೀ ಅಖಿಲ ಭಾರತೀಯ ಸಹ ಸಂಘಟನ ಮಂತ್ರಿ ದತ್ತಾತ್ರೇಯ ವಜ್ರಳ್ಳಿ ಮಾತನಾಡಿ, ಭಗವದ್ಗೀತೆಯು ಜಗತ್ತಿನ ಜಿಜ್ಞಾಸೆಗಳಿಗೆ ಪ್ರೇರಣೆಯಾದ ಗ್ರಂಥ. ಅಲ್ಲಲ್ಲಿ ಅಪಸ್ವರಗಳು ಗೀತೆ ವಿರುದ್ಧ ಕೇಳಿಬಂದಿವೆ. ಅಂಥವುಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಟೀಕೆ ಮಾಡುವವರಿಗೆ ಗೀತೆ ಕಾಲ ಕಾಲಕ್ಕೆ ಉತ್ತರ ನೀಡುತ್ತ ಬಂದಿದೆ. ಅಂತಹ ಉತ್ತರಗಳಿಗೆ ನಾವೆಲ್ಲ ಧ್ವನಿಯಾಗಿ ನಿಲ್ಲಬೇಕು ಎಂದರು.
ಮನುಷ್ಯನ ಜೀವನ ಉತ್ತಮಗೊಳಿಸುವ ಎಲ್ಲ ಸಂಗತಿಗಳು ಭಗವದ್ಗೀತೆಯಲ್ಲಿವೆ. ಉತ್ತಮ ಜೀವನಕ್ಕೆ ಇದು ಪ್ರೇರಣೆಯಾಗಿದೆ. ಲೋಕಕಲ್ಯಾಣಕ್ಕೆ ಬೇಕಾದ ಎಲ್ಲ ಅಂಶಗಳನ್ನು ಗ್ರಂಥ ಒಳಗೊಂಡಿದೆ. ಇಂತಹ ಗ್ರಂಥ ಪಾರಾಯಣ ಮಾಡುವ ಕೆಲಸ ಎಲ್ಲರಿಂದ ಆಗಬೇಕು ಎಂದರು.
ಗೀತಾಮೃತಮ್ ಸ್ವಾಗತ ಸಮಿತಿ ಅಧ್ಯೆ ಭಾರತೀ ಪಾಟೀಲ ಮಾತನಾಡಿ, ಎಲ್ಲ ಭಾಷೆಗಳ ತಾಯಿ ಸಂಸ್ಕೃತ, ಗೀತೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಜ್ಞಾನ ಬೆಳೆಸಿಕೊಳ್ಳಲು ಎಲ್ಲರೂ ಓದಬೇಕು ಎಂದರು.
ಉದ್ಯಮಿ ಮಹದೇವ ಕರಮರಿ ಮಾತನಾಡಿ, ಸಂಸ್ಕೃತ ಭಾರತೀ ಸಲುವಾಗಿ ನಗರದಲ್ಲಿ ಕಚೇರಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಗೀತಾಮೃತಮ್ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜನೆ ಮಾಡುವ ಆಶಯವಿದೆ ಎಂದು ಹೇಳಿದರು.
ಸಂಸ್ಕೃತ ಪ್ರದರ್ಶಿನಿ ಉದ್ಘಾಟನೆ:
ಸಂಸ್ಕೃತ ಭಾರತೀ ಆಶ್ರಯದಲ್ಲಿ ಅತ್ಯಂತ ಮಾಹಿತಿಪೂರ್ಣ, ಸುಲಭವಾಗಿ ಸಂಸತ ಅರ್ಥವಾಗುವಂತೆ ಸಂಸ್ಕೃತ ಪ್ರದರ್ಶಿನಿ ಏರ್ಪಡಿಸಲಾಗಿತ್ತು. ಇದು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರದರ್ಶಿನಿ ಉದ್ಘಾಟಿಸಿ ಮಾತನಾಡಿ, ಭಾರತದ ಇತಿಹಾಸ, ಪರಂಪರೆಯಲ್ಲಿ ಒಟ್ಟು ಭಾಷೆಗಳನ್ನು ಗಮನಿಸಿದಾಗ ಅತ್ಯಂತ ಪುರಾತನ ಭಾಷೆಗಳು ನಮ್ಮಲ್ಲಿ ಇವೆ ಎಂಬುದು ಗಮನಕ್ಕೆ ಬರುತ್ತದೆ. ಸಂಸ್ಕೃತಕ್ಕೆ ಕನಿಷ್ಠ ಐದು ಸಾವಿರ ವರ್ಷಗಳ ಇತಿಹಾಸವಿದೆ. ವೇದಗಳ ರಚನೆಗೆ ಸಂಸತ ಬಳಕೆಯಾಗಿದೆ. ಅಷ್ಟೊಂದು ದೊಡ್ಡ ಸಂಪತ್ತು ಸಂಸ್ಕೃತದಲ್ಲಿದೆ. ಪಾಲಕರು ಆಂಗ್ಲ ಭಾಷೆ ಕಲಿತರೆ ಸಾಕು ಎನ್ನುವ ಮನಸ್ಥಿತಿಯಿಂದ ಹೊರಬಂದು ನಮ್ಮತನ ಉಳಿಸಿಕೊಳ್ಳಲು ಮಕ್ಕಳಿಗೆ ಸಂಸ್ಕೃತ ಕಲಿಸಿಕೊಡಬೇಕು ಎಂದರು.
ಪ್ರಮುಖರಾದ ನಂದಕುಮಾರ, ಗೋವಿಂದ ಜೋಶಿ, ಚನ್ನು ಹೊಸಮನಿ, ಜಿತೇಂದ್ರ ಮಜೇಥಿಯಾ, ಸದಾನಂದ ಕಾಮತ್, ರಾಜಶೇಖರ ಪಾಟೀಲ, ಗಿರೀಶ ಟೆಂಗಿನಕಾಯಿ, ಅರುಣ ಹಬೀಬ ಇತರರು ಇದ್ದರು.