ಬಸವನಬಾಗೇವಾಡಿ: ಮನುಷ್ಯನ ಸ್ವಾರ್ಥದಿಂದ ನಮ್ಮ ಪರಿಸರ ಹಾಳಾಗುತ್ತಿದ್ದು, ಹೀಗೆಯೇ ಮುಂದುವರಿದರೆ ಬದುಕು ಕಷ್ಟಕರವಾಗುತ್ತದೆ. ಮುಂದೊಂದು ದಿನ ಸಕಲ ಜೀವರಾಶಿಗೂ ಆಪತ್ತು ತಪ್ಪಿದಲ್ಲ ಎಂದು ಜೆ.ಎಂ.ಎ್.ಸಿ ಮತ್ತು ಸಿವಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಹೊರ ಆವರಣದಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕೇಂದ್ರ ಸಂವಹನ ಇಲಾಖೆ ವಿಜಯಪುರ ( ವಾರ್ತಾ ಮತ್ತು ಪ್ರಚಾರ ಸಚಿವಾಲಯ), ತಾಲೂಕು ಕಾನೂನು ಸೇವಾ ಸಮಿತಿ, ನೆಹರು ಯುವಕೇಂದ್ರ ವಿಜಯಪುರ ಹಾಗೂ ಶಿಶು ಅಭಿವೃದ್ಧಿ ಯೋಜನೆ ಬಸವನಬಾಗೇವಾಡಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಷಣ ಮಾಸಾಚರಣೆ, ವಿಧಾನ ಸೆ ಸಮದಾನ್, ಸುಪೋಷಿತ ಕಿಶೋರಿ ಶಕ್ತಿನಾರಿ, ಸ್ವಚ್ಚತಾ ಹೀ ಸೇವಾ, ತಾಯಿ ಹೆಸರಿನಲ್ಲಿ ಒಂದು ಸಸಿ, ಹೊಸ ಅಪರಾಧ ಕಾನೂನುಗಳು, ಪ್ರಧಾನಮಂತ್ರಿ ಸೂರ್ಯ ಘರ್ ಬಿಜ್ಲಿ ಯೋಜನೆ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಛಾಯಾಚಿತ್ರ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಶಕ್ತಿ ಕೇಂದ್ರವಾಗಿದ್ದು, ಪ್ರತಿಯೊಬ್ಬರೂ ಹೆಣ್ಣನ್ನು ಗೌರವದಿಂದ ಕಾಣಬೇಕು. ಹೆಣ್ಣು ಮಕ್ಕಳು ಮನೆಗೆ ಸಿಮೀತವಾಗದೆ ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಜಮೀನು ಮತ್ತು ಮನೆ ಮಠ ಮಂದಿರಗಳಲ್ಲಿ ಗಿಡ ಮರಗಳನ್ನು ಬೆಳೆಸಬೇಕು. ಇದರ ಜೊತೆಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದಾಗ ತಕ್ಷಣ ವಿರೋಧ ಮಾಡಬೇಕು. ಸಂಬಂಧಪಟ್ಟವರಿಗೆ ಅದರ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಸುರಪುರ ಮಾತನಾಡಿ, ಮಹಿಳೆಯರು, ಮಕ್ಕಳು ಸಮತೋಲನ ಆಹಾರ ಪದ್ಧತಿ ಅನುಸರಿಸಬೇಕು. ಹೆಚ್ಚಾಗಿ ಕರಿದ ಪದಾರ್ಥ ಮತ್ತು ಕಲಬೇರಕೆಯ ಆಹಾರ ಸೇವನೆ ಮಾಡಬಾರದು. ಹಣ್ಣು ಹಂಪಲು, ತರಕಾರಿ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಸಮತೋಲನದಲ್ಲಿ ಈಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗ್ರೇಡ್-2 ತಹಸೀಲ್ದಾರ್ ಜಿ.ಎನ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಐ.ಸಿ.ಡಿ.ಎಸ್. ಘಟಕದ ನಿರೂಪನಾಧಿಕಾರಿ ಸಾವಿತ್ರಿ ಗುಗ್ಗರಿ, ಬಿ.ಇ.ಒ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ಚಿತ್ತರಗಿ, ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಎಸ್.ವಿ. ನಿಂಬಾಳ, ಜಿಲ್ಲಾ ನೆಹರು ಯುವ ಕೇಂದ್ರ ಅಧಿಕಾರಿ ರಾಹುಲ ಡೊಂಗ್ರೆ ಇತರರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಮೇಟಿ ಅವರು ತಾಯಿ ಮತ್ತು ಮಗುವಿನ ಕುರಿತು ಉಪನ್ಯಾಸ ನೀಡಿದರು. ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಸಹಾಯಕ ಸಿ.ಕೆ. ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನು ವಡ್ಡರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಅಕ್ಕನಾಗಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಸಿಗಳನ್ನು ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.