ಜಿಲ್ಲೆ

ಹೆಣ್ಣುಮಕ್ಕಳದ್ದು ವಿಶ್ರಾಂತಿರಹಿತ ಜೀವನ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ: ಸೂರ್ಯಚಂದ್ರರಂತೆ ನಿರಂತರವಾಗಿ ಕಾರ್ಯ ನಿರ್ವಹಿಸುವ ಮಹತ್ತರ ಕಾರ್ಯ ಹೆಣ್ಣು ಮಕ್ಕಳ ಕಾಯಕ ಎಂದು ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ತಿಳಿಸಿದರು.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಮಾದನಾಯಕನಹಳ್ಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಹಾಗೂ ಸ್ವ-ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಕುಟುಂಬದಲ್ಲಿ ಸ್ವಂತ ನಿರ್ಧಾರ ತಗೆದುಕೊಳ್ಳುವ ಶಕ್ತಿ ನೀಡುವ ಉದ್ದೇಶದಿಂದ ಜ್ಞಾನವಿಕಾಶ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಧರ್ಮಸ್ಥಳ ಸಂಸ್ಥೆಯ ಯೋಜನೆಗಳು ಗ್ರಾಮೀಣ ಭಾಗದ ಕೃಷಿ, ಅರೋಗ್ಯ ಸೇರಿ ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.

ಈ ಹಿಂದೆ ಮತದಾನ ಮಾಡಲು ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದ ಗ್ರಾಮೀಣ ಮಹಿಳೆಯರು, ಪ್ರಸ್ತುತ ಸಮಾಜದಲ್ಲಿ ತಾವೇ ರಾಜಕೀಯ ಕ್ಷೇತ್ರದಲ್ಲೇ ವಿಶೇಷ ಸ್ಥಾನಮಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಜೆ ಇಲ್ಲದೆಯೇ ಸಮಾಜದಲ್ಲಿ ದುಡಿಯುವ ಕಾಯಕಯೋಗಿ ಹೆಣ್ಣು.

ಮಹಿಳೆಯರು ತಮ್ಮ ಬೇಡಿಕೆಗಳನ್ನು ತಾವೇ ಪೂರೈಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಪರವಾಲಂಬಿಯಾಗುವ ಬದಲು ಸ್ವಾವಲಂಬಿಗಳಾಗಬೇಕು ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನಿಕಟಪೂರ್ವ ಅಧ್ಯಕ್ಷ ವಿ.ರಾಮಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರ ಅರ್ಥಿಕ ಬಲವರ್ಧನೆ ಜತೆಗೆ ಸಮಾಜಿಕ ಅರಿವು ಹೊಂದಲು ಜ್ಞಾನ ವಿಕಾಸದಡಿ ಕಾರ್ಯಗಾರಗಳು ಹೆಚ್ಚು ಸಹಕಾರಿಯಾಗಿವೆ. ಮಹಿಳೆಯರು ಸಾಮಾಜಿಕ, ಅರ್ಥಿಕ ಮತ್ತು ಶೈಕ್ಷಣಿಕವಾಗಿ ಪ್ರಬುದ್ಧತೆ ಹೊಂದಿದ್ದಾರೆ. ಯೋಜನೆಯಿಂದ ಸಾಕಷ್ಟು ಸೌಲಭ್ಯಗಳು ಮಹಿಳೆಯರಿಗೆ ಸಿಗುತ್ತಿದ್ದು, ಇದರಿಂದ ಹಲವಾರು ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರುತ್ತಿವೆ ಎಂದರು.

ವಿಚಾರಗೋಷ್ಠಿ, ಮಳಿಗೆ ಉದ್ಘಾಟನೆ: ಕಾರ್ಯಕ್ರದಲ್ಲಿ ತುರುವೇಕೆರೆ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಎಂ.ರೂಪಶ್ರೀ ವಿಶ್ವನಾಥ್ ಅವರು, ವೃತ್ತಿ ಬದುಕಿನೊಂದಿಗೆ ಕೌಟುಂಬಿಕ ಸಾಮರಸ್ಯ ಕಾಪಾಡಿಕೊಳ್ಳುವಲ್ಲಿ ಮಹಿಳೆಗಿರುವ ಅವಕಾಶಗಳು ಮತ್ತು ಸವಾಲುಗಳು ಕುರಿತು ವಿಚಾರ ಗೋಷ್ಠಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಸ್ವ-ಉದ್ಯೋಗ ಮಳಿಗೆಗಳ ಉದ್ಘಾಟನೆ, ವಿವಿಧ ಸಾಂಸ್ಕೃತಿ ಕಾರ್ಯಕ್ರಮವನ್ನು ಮಹಿಳೆಯರು ನಡೆಸಿಕೊಟ್ಟರು.

ರಾಜ್ಯ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷೆ ವೀಣಾ ರಮೇಶ್, ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಉಮರಬ್ಬ, ತಾಲೂಕು ಯೋಜನಾಧಿಕಾರಿ ಸುಜಾತಾ ಶೆಟ್ಟಿ, ಮಾದನಾಯಕಹಳ್ಳಿ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಮುರಳೀಧರ್, ಮುಖಂಡ ಪ್ರಕಾಶ್ ಮತ್ತಿತರರು ಉಪಸ್ಥಿತರಿದರು.

ಅಭಿನಂದನೆ ಮತ್ತು ಸವಲತ್ತು ವಿತರಣೆ

ಕಾರ್ಯಕ್ರಮದ ಪ್ರಯುಕ್ತ ವಿವಿಧ ಕ್ಷೇತ್ರದ 10ಕ್ಕೂ ಹೆಚ್ಚು ಮಹಿಳಾ ಸಾಧಕಿರನ್ನು ಸನ್ಮಾನಿಸಿ ಗೌರವಿಸಲಾಯಿತು. ವಾತ್ಸಲ್ಯ ಯೋಜನೆಯಡಿ ಮನೆ ಹಸ್ತಾಂತರ, ನಿರ್ಗತಿಕರಿಗೆ ಮಾಶಾಸನ, ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ಸೇರಿ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.