ಉಡುಪಿ: ಯುವಕನೊಬ್ಬ ಆಸ್ಪತ್ರೆಗೆ ದಾಖಲಿಸಿದ್ದ ಯುವತಿ ಕೊನೆಯುಸಿರೆಳೆದಿದ್ದು, ಯುವಕ ಇದೀಗ ನಾಪತ್ತೆ ಆಗಿದ್ದಾನೆ. ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿ ರಕ್ಷಿತಾ ನಾಯಕ್ ಎಂಬಾಕೆಯನ್ನು ಪ್ರಶಾಂತ್ ಕುಂದರ್ ಎಂಬಾತ ಶನಿವಾರ ಸಂಜೆ 6.30ರ ಸುಮಾರಿಗೆ ರಿಕ್ಷಾದಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆತಂದು ದಾಖಲು ಮಾಡಿಸಿದ್ದ. ಯುವತಿ ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಅಸುನೀಗಿದ್ದಾಳೆ. ಯುವತಿಯ ಬಗ್ಗೆ ಆಕೆಯ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿರುವ ಯುವಕ, ಕೊಲ್ಲೂರು ಸಮೀಪದ ಜಡ್ಕಲ್ನ ಪ್ರಶಾಂತ್ ಬಳಿಕ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಟ್ಟುಕೊಂಡಿದ್ದಾನೆ.
ಹಿರಿಯಡ್ಕ ಹತ್ತಿರದ ಕುಕ್ಕೆಹಳ್ಳಿ ನಿವಾಸಿಯಾಗಿರುವ ಯುವತಿ, ಕೆಲಸ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಉಡುಪಿ ನಗರದಲ್ಲಿ ವಾಸ್ತವ್ಯವಿದ್ದು, ಹದಿನೈದು ದಿನಗಳಿಗೊಮ್ಮೆ ಮನೆಗೆ ಬಂದುಹೋಗುತ್ತಿದ್ದಳು. ಉಡುಪಿಯ ಖಾಸಗಿ ಕಾಲೇಜೊಂದರಲ್ಲಿ ರಕ್ಷಿತಾ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಸದ್ಯ ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಉಡುಪಿ ನಗರ ಠಾಣೆ ಪೊಲೀಸರು, ಯುವಕನ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.