ಹಾವೇರಿ: ರಾತ್ರಿ ಎನ್ನುವುದನ್ನೂ ಲೆಕ್ಕಿಸದೆ ಪ್ರಿಯಕರನನ್ನು ಹುಡುಕಿಕೊಂಡು ಆತನ ಮನೆಗೆ ಹೋದ ಪ್ರೇಯಸಿ, ಪ್ರಿಯಕರನಿಗೆ ನುಂಗಲೂ ಆಗದ, ಉಗುಳಲೂ ಆಗದ ತುತ್ತಾಗಿ ಪರಿಣಮಿಸಿದ ಘಟನೆ ನಡೆದಿದೆ. ನಂತರ ಆ ರಾತ್ರಿ ಆಕೆ ಊಹಿಸಿರಲಾರದಂಥ ಸನ್ನಿವೇಶವೊಂದು ಎದುರಾಗಿದೆ.
ಪ್ರೇಯಸಿ ಇದ್ದಕ್ಕಿದ್ದಂತೆ ಅದರಲ್ಲೂ ರಾತ್ರಿಯೇ ಮನೆಗೆ ಬಂದಿದ್ದರಿಂದ ವಿಚಲಿತನಾದ ಪ್ರೇಮಿ, ಆ ರಾತ್ರಿಯೇ ಆಕೆಯನ್ನು ಕರೆದುಕೊಂಡು ಹೊರಗೆ ಹೋಗಿದ್ದಾನೆ. ಆದರೆ ಮಾರನೇ ದಿನ ಆಕೆ ಹಾವೇರಿ ತಾಲೂಕಿನ ಕರ್ಜಗಿ ಪಾರ್ಕ್ ಬಳಿ ಶವವಾಗಿ ಪತ್ತೆಯಾಗಿದ್ದಳು. ಶಿಲ್ಪಾ ದೊಡ್ಡಮನಿ ಎಂಬ 23 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆಯ ಪ್ರಿಯಕರ ಎತ್ತಿನಹಳ್ಳಿ ಗ್ರಾಮದ ಕರಬಸು ಕೋಡಿಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಆಕೆ ಶವವಾಗಿ ಪತ್ತೆಯಾದ 24 ಗಂಟೆಗಳಲ್ಲಿ ಕರಬಸುವನ್ನು ಹುಡುಕಿ ಬಂಧಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ ಮನೆಗೆ ಬಂದಿದ್ದ ಪ್ರೇಯಸಿ ಶಿಲ್ಪಾ, ತನ್ನನ್ನು ಮದುವೆಯಾಗು ಹಾಗೂ ಹಣ ಕೊಡು ಎಂದು ಪದೇಪದೆ ಪೀಡಿಸುತ್ತಿದ್ದಳು. ಬುಧವಾರ ರಾತ್ರಿ ಆಕೆ ಹೇಳದೆ ಕೇಳದೆ ಮನೆಗೆ ಬಂದಿದ್ದಳು. ಹೀಗಾಗಿ ಆಕೆಯನ್ನು ರಾತ್ರಿ ಬೈಕ್ನಲ್ಲಿ ಕರೆದೊಯ್ದು, ಒಂಟಿ ಮನೆಯೊಂದರಲ್ಲಿ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಕರಬಸು ಪೊಲೀಸರಿಗೆ ತಿಳಿಸಿದ್ದಾನೆ. ಸ್ಥಳಕ್ಕೆ ಹೆಚ್ಚುವರಿ ಪೋಲಿಸ್ ಅಧಿಕಾರಿ ವಿಜಯಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.