ಜಿಲ್ಲೆ

ಮಾಜಿ ಪ್ರೇಮಿಯ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ

Dakshina Kannada

ಈಶ್ವರಮಂಗಲ: ಪುತ್ತೂರಿನ ಸಂಪ್ಯದಲ್ಲಿ ಮಾಜಿ ಪ್ರಿಯಕರನ ಕಿರುಕುಳದಿಂದ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಮಧುಶ್ರೀ(26) ಮೃತಪಟ್ಟವರು.

ಮಾಜಿ ಪ್ರಿಯಕರ ನೀಡುತ್ತಿದ್ದ ಮಾನಸಿಕ ಕಿರುಕುಳ, ಜೀವ ಬೆದರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಡೈರಿಯಲ್ಲಿ ಬರೆದುಕೊಂಡಿದ್ದು, ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಬಾಲಕೃಷ್ಣ ಗೌಡರ ಪುತ್ರಿ ಮಧುಶ್ರೀ ನಾಲ್ಕು ವರ್ಷದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಆಸ್ಪತ್ರೆ ಹಾಸ್ಟೆಲ್‌ನಲ್ಲಿ ತಂಗುತ್ತಿದ್ದರು. ರಜಾದಿನಗಳಲ್ಲಿ ಹೆಚ್ಚಾಗಿ ಅಜ್ಜಿ ಮನೆಗೆ ಬರುತ್ತಿದ್ದರು. ಮಂಗಳವಾರ ಮಧ್ಯಾಹ್ನ ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಆಕೆ ಊಟವಾದ ಬಳಿಕ ತೋಟಕ್ಕೆ ಹೋಗಿ ಕೆರೆಗೆ ಹಾರಿದ್ದಾರೆ.

ಆತ್ಮಹತ್ಯೆಗೆ ದೇವಿಚರಣ್ ಎಂಬ ವಿವಾಹಿತನೊಬ್ಬ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮಧುಶ್ರೀ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದರು. ನಾನು ಹಾಗೂ ಸಂಪಾಜೆಯ ದೇವಿಚರಣ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಆದರೆ ಕಳೆದ ಜೂನ್‌ನಲ್ಲಿ ಆತನಿಗೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿತ್ತು. ಹೀಗಿದ್ದರೂ ಆತ ನನ್ನ ಜತೆ ಸಂಪರ್ಕದಲ್ಲಿದ್ದ. ನನಗೆ ಬೇರೆಯವರನ್ನು ಮದುವೆಯಾಗದ್ದಂತೆ ಒತ್ತಾಯ ಮಾಡುತ್ತಿದ್ದ. ಒಂದು ವೇಳೆ ಮದುವೆಯಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆಕೆ ಡೈರಿಯಲ್ಲಿ ಬರೆದುಕೊಂಡಿದ್ದಾರೆ.