ಮಡಿಕೇರಿ:
ದಕ್ಷಿಣ ಅಮೇರಿಕಾದ ಗಯಾನಾದಲ್ಲಿ ಉದ್ಯೋಗದಲ್ಲಿದ್ದು ಅನಾರೋಗ್ಯದಿಂದ ನಿಧನರಾದ ಮದೆನಾಡು ಗ್ರಾಮದ ಪಿ.ಬಿ. ಗಿರೀಶ್ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡಿದೆ.
ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ವಿದ್ಯಾರ್ಥಿ ಗಿರೀಶ್ ಅವರ ಪ್ರಾರ್ಥಿವ ಶರೀರ ವಿದೇಶದಿಂದ ತಾಯ್ನಾಡಿಗೆ ತರಲು ಸುಮಾರು 12 ಲಕ್ಷ ರೂಗಳು ಖರ್ಚಾಗಲಿದೆ. ಇಷ್ಟು ದೊಡ್ಡ ಮೊತ್ತವನ್ನು ಭರಿಸುವಷ್ಟು ಗಿರೀಶನ ಕುಟುಂಬ ಶಕ್ತರಾಗಿಲ್ಲದ ಕಾರಣ ಮಂಗಳವಾರ (ಜು.23) ಮುರಾರ್ಜಿ ದೇಸಾಯಿ ವಸತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ತಂಡದ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಕೆ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ವಿಷಯವನ್ನು ಅವರ ಗಮನಕ್ಕೆ ತಂದಿದ್ದರು.
ಕೂಡಲೇ ಸ್ಪಂದಿಸಿದ ವಿರಾಜಪೇಟೆ ಶಾಸಕರೂ ಆಗಿರುವ ಪೊನ್ನಣ್ಣ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ 3.60 ಲಕ್ಷ ರೂ. ಸರ್ಕಾರವೇ ಭರಿಸುವಂತೆ ಆದೇಶವನ್ನು ಹೊರಡಿಸುವಲ್ಲಿ ನೆರವಾಗಿದ್ದಾರೆ.
ಪೊನ್ನಣ್ಣ ಭೇಟಿ ವೇಳೆ ಸಮ್ಮಿಲನ ತಂಡದಲ್ಲಿ ಮಹೇಶ್, ಪ್ರತಾಪ್, ಅಭಿಷೇಕ್, ಲೋಕೇಶ್ ಇದ್ದರು.