ಗೋಣಿಕೊಪ್ಪ: ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಆದಿವಾಸಿ ಜನರ ಸಂಖ್ಯೆ ಹೆಚ್ಚಾಗಿದ್ದು, ಅವರ ಕುಂದುಕೊರತೆ ಪರಿಹರಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಸಭೆ ಆಯೋಜಿಸಲಾಗುವುದು ಎಂದು ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಸಮಗ್ರ ಗಿರಿಜನ ಯೋಜನಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಗಿರಿಜನ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅರಣ್ಯ ಹಕ್ಕು ಕಾಯ್ದೆಯಡಿ ಇನ್ನೂ ಸಾಕಷ್ಟು ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ಹಾಗೂ ಸಮುದಾಯ ಹಕ್ಕುಪತ್ರ ಸಹ ದೊರೆಯಬೇಕಿದೆ. ಆ ನಿಟ್ಟಿನಲ್ಲಿ ಹಲವು ಸಮಸ್ಯೆಗಳನ್ನು ಚರ್ಚಿಸಿ ಇತ್ಯರ್ಥಪಡಿಸಲು ಸಭೆ ನಡೆಸಲಾಗುವುದು. ಈಗಾಗಲೇ ಗಿರಿಜನರ ಕುಂದುಕೊರತೆ ಆಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಆ ನಿಟ್ಟಿನಲ್ಲಿ ಸ್ಥಳೀಯವಾಗಿಯೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಯರವ, ಕುಡಿಯ, ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ ಸೋಲಿಗ ಹೀಗೆ ಹಲವು ಆದಿವಾಸಿ ಕುಟುಂಬಗಳು ಇದ್ದು, ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿದ್ದಾರೆ. ಪ್ರತಿಭೆಯನ್ನು ಅನಾವರಣಗೊಳಿಸಲು ಗಿರಿಜನ ಉತ್ಸವ ಉತ್ತಮ ವೇದಿಕೆಯಾಗಿದೆ ಎಂದರು.
ಜಿಪಂ ಮಾಜಿ ಸದಸ್ಯೆ ಪಂಕಜಾ, ಸಮಗ್ರ ಗಿರಿಜನ ಯೋಜನಾ ಇಲಾಖೆಯ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಂ.ಚಂದ್ರಕಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಗ್ರಾಪಂ ಅಧ್ಯಕ್ಷರಾದ ಪಿ.ಎಸ್.ಪೊನ್ನು, ತಹಸೀಲ್ದಾರ್ ಪ್ರಶಾಂತ್, ರಾಮಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ವನಜಾಕ್ಷಿ, ಪಿಡಿಒ ಗುರುಶ್ರೀ, ಲ್ಯಾಂಪ್ ಸೊಸೈಟಿ ಅಧ್ಯಕ್ಷೆ ಮಣಿ, ಮುಖ್ಯ ಶಿಕ್ಷಕರಾದ ಸಿದ್ದಲಿಂಗ ಶೆಟ್ಟಿ, ಪಾರ್ವತಿ, ಮಂಗಳಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಪ್ರೋಜ್ ಇತರರು ಇದ್ದರು.
ತಿತಿಮತಿಯಲ್ಲಿ ನಡೆದ ಗಿರಿಜನ ಉತ್ಸವವು ಜನಾಕರ್ಷಣೆಯಾಗಿತ್ತು. ಜೆ.ಪಿ.ರಮೇಶ್ ಅವರ ಗಿರಿಜನ ಆದಿವಾಸಿ ಹಾಡು, ನಾಲಡಿ ಗ್ರಾಮದ ಬೋಜಕ್ಕಿ ಮತ್ತು ತಂಡದ ನೃತ್ಯ ಪ್ರದರ್ಶನ, ತೋರ ಗ್ರಾಮದ ಕುಡಿಯರ ಗೋಪಮ್ಮ ಮತ್ತು ತಂಡದ ಉರುಟ್ಟಿಕೋಟ್ ನೃತ್ಯ, ಕುಡಿಯರ ಶಾರದಾ ಮತ್ತು ತಂಡದಿಂದ ನೃತ್ಯ, ನಾಣಚ್ಚಿ ಕುಮಾರ ತಂಡದಿಂದ ಜೇನುಕುರುಬ ನೃತ್ಯ, ವಿವಿಧ ಆದಿವಾಸಿ ತಂಡಗಳು ಕಲಾ ಪ್ರದರ್ಶನ ಗಮನ ಸೆಳೆಯಿತು.