ಜಿಲ್ಲೆ

ಗಿರಿಜಾ ಕಲ್ಯಾಣ ಮಹೋತ್ಸವ ಸಂಪನ್ನ: ಗಾಯತ್ರಿ ವಿಪ್ರ ಮಹಿಳಾ ಮಂಡಳಿಯಿಂದ ಆಯೋಜನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಗಾಯತ್ರಿ ವಿಪ್ರ ಮಹಿಳಾ ಮಂಡಳಿ ವತಿಯಿಂದ ನಗರದ ಶಂಕರ ಸೇವಾ ಪ್ರತಿಷ್ಠಾನದ ಆವರಣದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವೇದಬ್ರಹ್ಮ ಡಾ.ವಿ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಏರ್ಪಡಿಸಲಾಗಿತ್ತು. ವಿವಾಹ ಮಹೋತ್ಸವದ ಅಂಗವಾಗಿ ಕಂಕಣಧಾರಣೆ, ಮಾಂಗಲ್ಯಧಾರಣೆ, ಕಾಶಿಯಾತ್ರೆ ನಡೆದವು. ಬಳಿಕ ಬೆಂಗಳೂರಿನ ಲಕ್ಷ್ಮೀಪತಿ ಶಾಸ್ತ್ರಿ ಹಾಗೂ ನಾರಾಯಣ ಗುರೂಜಿ ಅವರ ಸಾರಥ್ಯದಲ್ಲಿ ಧಾರ್ಮಿಕ ಕೈಂಕರ‌್ಯಗಳು ವಿಧಿ ವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿದವು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ವಿಪ್ರ ಮಹಿಳಾ ಮಂಡಳಿಯವರು ಅದ್ದೂರಿಯಾಗಿ ಗಿರಿಜಾ ಕಲ್ಯಾಣ ಮಹೋತ್ಸವವನ್ನು ನಡೆಸಿದ್ದಾರೆ. ಸದ್ಯ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ. ಇದು ನಿವಾರಣೆಯಾಗಿ ಲೋಕ ಕಲ್ಯಾಣವಾಗಲಿ ಎಂದು ಕೋರಿ ನಡೆಸಿರುವುದು ಶ್ಲಾಘನೀಯ. ನಾನು ಹಿಂದೆ ತಿರುಪತಿಯಿಂದ ಉತ್ಸವ ಮೂರ್ತಿಗಳನ್ನು ತರಿಸಿ ಲಕ್ಷಾಂತರ ರೂ. ಖರ್ಚು ಮಾಡಿ ಶ್ರೆನಿವಾಸ ಕಲ್ಯಾಣೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡಿಸಿದ್ದೆ. ಈಗ ಬೆಳ್ಳೂರು ಶಿವರಾಮ್ ಮತ್ತಿತರರು ಗಿರಿಜಾ ಕಲ್ಯಾಣ, ಭೈರವ ಉತ್ಸವ ಅಥವಾ ಇನ್ನೊಂದು ಉತ್ಸವವನ್ನು ಮಾಡುವಂತೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಮಾಡಲಾಗುವುದು. ಮಾರ್ಚ್ 2, 3ರಂದು ಅನಂತ ಪದ್ಮನಾಭ ಮತ್ತು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಬೂದನೂರು ಉತ್ಸವ ಮಾಡುತ್ತಿದ್ದೇವೆ. ಅದರಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಭಾನುಪ್ರಕಾಶ್ ಶರ್ಮಾ ಮಾತನಾಡಿ, ಲೋಕ ಕಲ್ಯಾರ್ಥವಾಗಿ ವಿಪ್ರ ಮಹಿಳಾ ಮಂಡಳಿಯವರು ಅತ್ಯಂತ ಯಶಸ್ವಿಯಾಗಿ ಗಿರಿಜಾ ಕಲ್ಯಾಣ ಮಹೋತ್ಸವವನ್ನು ನಡೆಸಿದ್ದಾರೆ. ದೇವಾಲಯದ ಮೇಲ್ಭಾಗದಲ್ಲಿ ಗಿರಿಜಾ ದೇವಿಯನ್ನು ಸ್ವಾಗತ ಮಾಡಿ ಪರಮೇಶ್ವರನ ಆಶೀರ್ವಾದದೊಂದಿಗೆ ವಿಶೇಷವಾಗಿ ಕಲ್ಯಾಣ ಮಹೋತ್ಸವವನ್ನು ನಡೆಸಲಾಯಿತು ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಬೆಳ್ಳೂರು ಎಸ್.ಶಿವರಾಂ, ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷ ಸದಾಶಿವ ಭಟ್, ಗಾಯತ್ರಿ ವಿಪ್ರ ಮಹಿಳಾ ಮಂಡಳಿ ಸದಸ್ಯರಾದ ಲಲಿತಾ, ಶಮಂತಕ, ಭಾರತಿ ಅಡಿಗ, ವಿಜಯಾ, ಆಶಾ, ಲತಾ, ರೂಪಾ, ರಾಜಲಕ್ಷ್ನೀ, ಜ್ಞಾನವಿ, ಮೀರಾ ಇತರರಿದ್ದರು.