ವಿಜಯಪುರ: ತಿಕೋಟಾ ತಾಲೂಕಿನ ತೊರವಿ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಕೋಲ್ಡ್ ಸ್ಟೋರೇಜ್‌ನ ಸ್ಥಳ ಪರಿಶೀಲನೆ ನಡೆಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಉದ್ದೇಶಿತ ಕಾಮಗಾರಿಗಾಗಿ ಡಿಪಿಆರ್ ತಯಾರಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ತೊರವಿ ಗ್ರಾಮಕ್ಕೆ ವಿವಿಧ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಭೇಟಿ ನೀಡಿ ಕಾಮಗಾರಿಯ ಮಾಹಿತಿ ಕಲೆ ಹಾಕಿದ ಸಿಇಒ ಶಿಂಧೆ, ಸರ್ಕಾರದಿಂದ ಮಂಜೂರಾದ 10,000 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಬೇಕಾದ ಸಕಲ ಸಿದ್ಧತೆ ಕೈಗೊಳ್ಳಲು ಸೂಚಿಸಿದರು.
ಯೋಜನೆ ರೂಪುರೇಷಗಳನ್ನು ತಯಾರಿಸುವ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಆರ್ಥಿಕ ಕಾರ್ಯ ಸಾಧ್ಯತೆ ಹಾಗೂ ನಿರ್ವಹಣಾ ವೆಚ್ಚದ ಸಾಧ್ಯತೆಯ ಬಗ್ಗೆ ಅಧ್ಯಯನ ಮಾಡಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಅಧಿಕ ಪ್ರಯೋಜನ ಪಡೆಯಲು ಅನುಕೂಲವಾಗುವಂತೆ ಮತ್ತು ಭವಿಷ್ಯದಲ್ಲಿ ಶೀಥಲೀಕರಣದ ಕಟ್ಟಡ ವಿಸ್ತರಣೆಗೆ ಅವಕಾಶವಿರುವಂತೆ ಯೋಜನೆಯನ್ನು ರೂಪಿಸಲು ತಿಳಿಸಿದರು.
ಯೋಜನಾ ಸ್ಥಳದಲ್ಲಿ 800 ಕೆವಿ ಸಾಮರ್ಥ್ಯದ ವಿದ್ಯುತ್ ಸೌಲಭ್ಯ ಒದಗಿಸಲು ಇರುವ ಅವಕಾಶಗಳು ಹಾಗೂ ತಗಲುವ ವೆಚ್ಚಗಳ ಕುರಿತು ಯೋಜನಾ ಅಂದಾಜು ತಯಾರಿಸಲು ಹೆಸ್ಕಾಂನ ಸಹಾಯಕ ಅಭಿಯಂತರು ಅವರಿಗೆ ಸೂಚಿಸಿದರು.
ನಿಯೋಜಿತ ಸ್ಥಳಕ್ಕೆ ಅಥಣಿ ರಸ್ತೆಯಿಂದ ಮಹಿಳಾ ವಿಶ್ವ ವಿದ್ಯಾಲಯದ ಹಿಂಭಾಗದ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕೂಡುವ ರಸ್ತೆಯ ಮೂಲಕ ಪ್ರವೇಶ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಅಭಿಯಂತರರಿಗೆ ಕ್ರಮ ವಹಿಸಲು ಸೂಚಿಸಿದರು.
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕರು ಇವರಿಗೆ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳಲು ಹಾಗೂ ಅನುಷ್ಠಾನ ಸಂಸ್ಥೆಗೆ ಬೇಕಾದ ಎಲ್ಲ ಸಹಕಾರವನ್ನು ನೀಡಲು ಸೂಚಿಸಿದರು.
ಕೋಲ್ಡ್ ಸ್ಟೋರೇಜ್ ಜೊತೆಗೆ ಕಲರ್ ಸಾರ್ಟಿಂಗ್ ಹಾಗೂ ಗ್ರೇಡಿಂಗ್ ಘಟಕ ನಿರ್ಮಾಣದ ಪ್ರಸ್ತಾವನೆ ಅನುಮೋದನೆಯಾಗಿದ್ದು, ಇದರ ಉದ್ದೇಶ ದ್ರಾಕ್ಷಿ ಹಣ್ಣು ಮತ್ತು ಒಣದ್ರಾಕ್ಷಿಗಳ ಸಂಗ್ರಹಣೆ, ಸಂಸ್ಕರಣೆ, ಸಾಗಣೆಯನ್ನು (ಕೋಲ್ಡ್ ಚೈನ್ ಸೌಲಭ್ಯದೊಂದಿಗೆ) ವೈಜ್ಞಾನಿಕವಾಗಿ ನಿರ್ವಹಿಸಲು ಮತ್ತು ಶೀಥಲೀಕರಿಸಿ ಸರಕು ಸಾಗಾಣಿಕೆ ಒದಗಿಸುವುದಾಗಿದೆ. ಇದರಿಂದ ಜಿಲ್ಲೆಯಲ್ಲಿನ ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಎಂ.ಎಸ್. ಎಲ್ ಪ್ರಭಾಕರ, ವಿ. ಭರತ, ನಬಾರ್ಡ್ ಸಂಸ್ಥೆಯ ಸಮಾಲೋಚಕ ಶರತ್ ವಿ, ಮುಖ್ಯ ಇಂಜಿನಿಯರ್ ಪ್ರಭಾಕರ ಎಲ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ, ತಿಕೋಟಾ ತಾಪಂ ಇಒ ಬಸವರಾಜ ಐನಾಪುರ, ವೈನ್ ಹಾಗೂ ಗ್ರೇಪ್ಸ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು, ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಿ.ಎಸ್. ಚವಾಣ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಪಾಟೀಲ, ನಾಗೇಂದ್ರ ಗುರುನಾಳ, ಸಚಿನ ಉಟಗಿ, ತೊರವಿ ಗ್ರಾಪಂ ಪಿಡಿಒ ರಾಜಶ್ರೀ ತುಂಗಳ ಮತ್ತಿತರರಿದ್ದರು.