ಜಿಲ್ಲೆ

ಶುಂಠಿಯನ್ನು ಬಾಧಿಸುವ ಶಿಲೀಂಧ್ರ ರೋಗ ಪತ್ತೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲಿ ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗವೊಂದು ಪತ್ತೆಯಾಗಿದೆ.

ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಂಠಿ ಬೆಳೆಯನ್ನು ತೀವ್ರವಾಗಿ ಭಾದಿಸಿದ ಹೊಸ ಶಿಲೀಂಧ್ರ ರೋಗವನ್ನು ಕೇರಳದ ಕೋಜಿಕೋಡ್‌ನ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಶುಂಠಿಯಲ್ಲಿ ಕಂಡುಬAದಿರುವ ಈ ರೋಗ ಪೈರಿಕ್ಯುಲೇರಿಯಾ ಎಸ್‌ಪಿ ಎಂಬ ಶಿಲೀಂಧ್ರದಿAದ ಹರಡುತ್ತದೆ. ಪೈರಿಕ್ಯುಲೇರಿಯಾವು ಭತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಬ್ಲಾಸ್ಟ್ ರೋಗ ಉಂಟುಮಾಡುತ್ತದೆ. ಶುಂಠಿಯಲ್ಲಿ ಇದು ಮೊದಲ ಬಾರಿಗೆ ವರದಿಯಾಗಿದೆ. ಈ ರೋಗಬಂದ ಶುಂಠಿ ಗಿಡದ ಎಲೆಗಳು ಹಳದಿಯಾಗಿ ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತದಲ್ಲಿ ಕಪ್ಪು ಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಜೊತೆಗೂಡಿರುತ್ತದೆ. ಒಮ್ಮೆ ಸೋಂಕು ತಗುಲಿದರೆ, ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ. ಇದು ತೀವ್ರವಾದ ಬೆಳೆ ನಷ್ಟ ಮತ್ತು ಶುಂಠಿಯ ಎಲೆ ಹಾಗೂ ಕಾಂಡದ ಒಣಗುವಿಕೆಗೆ ಕಾರಣವಾಗುತ್ತದೆ.

ರೋಗಪೀಡಿತ ಸಸ್ಯಗಳ ಗೆಡ್ಡೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಖಚಿತಪಡಿಸಿದ್ದಾರೆ. ಸಮಸ್ಯೆಯು ಎಲೆಗಳ ಅಕಾಲಿಕ ಹಳದಿ ಮತ್ತು ಒಣಗಿಸುವಿಕೆಗೆ ಕಾರಣವಾಗುತ್ತದೆ. ಇದು ಶುಂಠಿ ಗೆಡ್ಡೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೋಗದಿಂದಾಗಿ, ಕೊಡಗಿನ ರೈತರು ಗೆಡ್ಡೆಗಳ ತೂಕದಲ್ಲಿ ಶೇ. 30 ರಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಸಂಶೋಧಕರ ಪ್ರಕಾರ, ಕೊಡಗಿನಲ್ಲಿರುವ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಿಂದ ರೋಗ ಹರಡುವಿಕೆ ಹೆಚ್ಚಾಗಿ ಉಂಟಾಗುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ಬೆಳಗ್ಗೆ ಇಬ್ಬನಿ ಬೀಳುತ್ತದೆ. ಇದು ಶಿಲೀಂಧ್ರದ ಅಭಿವೃದ್ಧಿ ಹೊಂದಲು ಮತ್ತು ಹರಡಲು ಸೂಕ್ತವಾದ ವಾತಾವರಣ ಒದಗಿಸುತ್ತದೆ. ಇದರಿಂದಾಗಿ ಕೊಡಗು ಮತ್ತು ಸುತ್ತ ಮತ್ತಲಿನ ಕೆಲವು ಪ್ರದೇಶದ ಶುಂಠಿ ಹೊಲಗಳಲ್ಲಿ ರೋಗವು ವೇಗವಾಗಿ ಹರಡಲು ಕಾರಣವಾಗಿದೆ.

ಆದರೆ ಕರ್ನಾಟಕ ಮತ್ತು ಕೇರಳದ ಇತರ ಭಾಗಗಳಲ್ಲಿನ ವಿಭಿನ್ನ ಹವಾಮಾನದಿಂದ ಬೆಳೆಯು ಹಾನಿಗೊಳಗಾಗಿಲ್ಲ. ಐ.ಸಿ.ಎ.ಆರ್., ಐ. ಐ. ಎಸ್. ಆರ್., ಕೋಜಿಕೋಡು ಅದರ ಪ್ರಾದೇಶಿಕ ಕೇಂದ್ರವಾದ ಅಪ್ಪಂಗಳ ತಂಡ ನಡೆಸಿದ ಸಂಶೋಧನೆ ಕೊಡಗಿನ ಹವಾಮಾನ ಪರಿಸ್ಥಿತಿಗಳು ಅದರಲ್ಲೂ ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇಬ್ಬನಿ ಬೀಳುವಿಕೆ ರೋಗ ಹರಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎನ್ನುವುದನ್ನು ಪತ್ತೆ ಹಚ್ಚಿದೆ.

ಐ.ಸಿ.ಎ.ಆರ್. – ಐ. ಐ. ಎಸ್. ಆರ್.ನಲ್ಲಿನ ಸಂಶೋಧನಾ ತಂಡ ರೋಗವನ್ನು ಅಧ್ಯಯನ ಮಾಡುವಾಗ ಗಮನಾರ್ಹ ಸವಾಲುಗಳನ್ನು ಎದುರಿಸಿದೆ. ರೋಗದ ಮಾದರಿಗಳು ಕೋಜಿಕೋಡ್‌ನ ಪ್ರಯೋಗಾಲಯವನ್ನು ತಲುಪುವ ವೇಳೆಗೆ ಹೆಚ್ಚಾಗಿ ಒಣಗಿರುತ್ತಿದ್ದವು. ಆದರೂ ತಿಂಗಳುಗಳ ಸತತ ಸಂಶೋಧನೆಯಿAದ ರೋಗದ ಹಿಂದಿನ ಕಾರಣವಾದ ಪೈರಿಕ್ಯುಲೇರಿಯಾ ಎಸ್‌ಪಿ ಅನ್ನು ವಿಜ್ಞಾನಿಗಳು ದೃಢೀಕರಿಸಲು ಸಾಧ್ಯವಾಯಿತು.

ರೋಗವನ್ನು ನಿರ್ವಹಿಸಲು ವಿಜ್ಞಾನಿಗಳು ಶಿಲೀಂಧ್ರನಾಶಕಗಳಾದ ಪ್ರೊಪಿಕೊನಜೋಲ್ ಅನ್ನು 1 ಎಂಎಲ್/ಲೀ ಅಥವಾ ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್ ಸಂಯೋಜನೆಯನ್ನು 2 ಗ್ರಾಂ/ಲೀ ಅನುಪಾತದಲ್ಲಿ ಶಿಫಾರಸು ಮಾಡುತ್ತಾರೆ. ಬೀಜದ ಗೆಡ್ಡೆಗಳನ್ನು ಶೇಖರಿಸುವ ಮೊದಲು ಈ ಶಿಲೀಂಧ್ರನಾಶಕದಲ್ಲಿ 30 ನಿಮಿಷಗಳ ಕಾಲ ಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕಾಗುತ್ತದೆ. ರೋಗನಿರೋಧಕ ಕ್ರಮವಾಗಿ ಪ್ರೊಪಿಕೊನಜೋಲ್ ಅಥವಾ ಟೆಬುಕೊನಜೋಲ್ 1ಮಿಲೀ/ಲೀ ಅನ್ನು ನಾಟಿ ಮಾಡಿದ ನಾಲ್ಕು ತಿಂಗಳ ನಂತರ ಸಿಂಪಡಿಸಬೇಕು.

ರೋಗಲಕ್ಷಣವಾದ ಎಲೆಗಳ ಮೇಲೆ ಕಪ್ಪುಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಹಳದಿ ಭಾಗದಿಂದ ಸುತ್ತುವರಿಯುವುದನ್ನು ಕಂಡುಬAದರೆ ರೋಗದ ತ್ವರಿತ ಹರಡುವಿಕೆಯನ್ನು ತಡೆಯಲು ತಕ್ಷಣ ಶಿಲೀಂಧ್ರನಾಶಕ ಸಿಂಪಡಿಸಬೇಕು. ಪೈರಿಕ್ಯುಲೇರಿಯ ಶಿಲೀಂಧ್ರ ಅತಿ ವೇಗವಾಗಿ ಹರಡುವುದರಿಂದ ರೈತರು ಅತ್ಯಂತ ವೇಗವಾಘಿ ಕಾರ್ಯನಿರ್ವಹಿಸಬೇಕು. ಅಗತ್ಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಈ ರೋಗ ಕೇವಲ 10 ಗಂಟೆಗಳ ಅವಧಿಯಲ್ಲಿ ದೊಡ್ಡ ಪ್ರದೇಶಗಳಲ್ಲಿ ಹರಡಬಹುದು, ಕೆಲವು ರೋಗ ಪೀಡಿತ ತೋಟಗಳು 20 ಕಿಲೋ ಮೀಟರ್ ಅಂತರದಲ್ಲಿದ್ದರೂ ರೋಗ ಹರಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಈ ರೋಗದಿಂದ ಬೆಳೆ ಹಾನಿಗೊಳಗಾದ ರೈತರು ರೋಗಪೀಡಿತ ಪ್ರದೇಶಗಳಲ್ಲಿ ಶುಂಠಿ ಕೃಷಿ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲು ತಜ್ಷರು ಸಲಹೆ ನೀಡುತ್ತಾರೆ. ರೋಗಕಾರಕ ಶಿಲೀಂಧ್ರದ ವರ್ತನೆ ಮತ್ತು ಪರಿಸರ ಪ್ರಚೋದಕಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಂಶೋಧನಾ ತಂಡವು ಹೆಚ್ಚಿನ ಅಧ್ಯಯನಗಳನ್ನು ನಡೆಸುತ್ತಿದೆ ಎಂದು ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.