ಮಡಿಕೇರಿ:
ಬೆಳೆದ ಬೆಳೆಗೆ ಸಮರ್ಪಕವಾದ ಬೆಲೆ ಸಿಗದ ಕಾರಣ ಶುಂಠಿ ಬೆಳೆದ ಕೃಷಿಕರು ಕಂಗಾಲಾಗಿದ್ದು ಆರ್ಥಿಕವಾಗಿ ಸಾಕಷ್ಟು ನಷ್ಟಕ್ಕೆ ತುತ್ತಾಗುತ್ತಿರುವುದರಿಂದ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಶುಂಠಿ ಬೆಳೆಗಾರರ ಹಿತ ಕಾಪಾಡಬೇಕೆಂದು ಕೊಡಗು ಜಿಲ್ಲಾ ಶುಂಠಿ ಕೃಷಿಕರು ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬAಧ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಪತ್ರವನ್ನು ನೀಡಿರುವ ಬೆಳೆಗಾರರು, ಶುಂಠಿ ಬೆಳೆಯಲು ತಗಲುವ ಉತ್ಪಾದಕ ವೆಚ್ಚ ಅಧಿಕವಾಗಿದೆ. ಬೆಲೆ ಹಾಗೂ ಬೆಳೆಯ ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಶುಂಠಿ ಬೆಳೆಗಾರರಿಗೆ ಕ್ವಿಂಟಾಲ್ ಗೆ ಕನಿಷ್ಠ 7 ಸಾವಿರ ರೂ.ಗಳ ಬೆಂಬಲ ಬೆಲೆ ನೀಡುವ ಮೂಲಕ ಕೃಷಿಕರನ್ನು ಆರ್ಥಿಕ ಸಂಕಷ್ಟದಿAದ ಪಾರು ಮಾಡಬೇಕು.
ಮಾರುಕಟ್ಟೆಯಲ್ಲಿ ಪ್ರಸ್ತುತ ಶುಂಠಿಯ ಬೆಲೆ 60 ಕೆಜಿ ತೂಕದ ಚೀಲವೊಂದಕ್ಕೆ ಸಾವಿರ ರೂ.ಗಳಿಂದ 1, 100 ರೂಗಳಿದ್ದು, ವರ್ಷವಿಡೀ ಲಕ್ಷಾಂತರ ರೂ ಹಣ ಖರ್ಚು ಮಾಡಿ ಬೆಳೆ ಬೆಳೆವ ರೈತರಿಗೆ ಏನೇನೂ ಸಾಲದಾಗಿದೆ. ಬೆಳೆಗೆ ಖರ್ಚು ಮಾಡಿದ ಹಣವೂ ಕೂಡ ಸಿಗಲಾರದೇ ಆತ್ಮಹತ್ಯೆಯತ್ತ ಚಿಂತೆ ಮಾಡುವಷ್ಟು ಸಂಕಷ್ಟದಲ್ಲಿ ಶುಂಠಿ ಬೆಳೆದ ರೈತರಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರವೇ ರಾಜ್ಯದಾದ್ಯಂತ ಶುಂಠಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಥವಾ ಈಗ ಇರುವ ಖಾಸಗಿ ಶುಂಠಿ ಖರೀದಿ ಘಟಕಗಳ ಬೆಂಬಲ ನೀಡಿ ರೈತರಿಂದ ನೇರವಾಗಿ ಖರೀದಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
2012 - 13 ನೇ ಸಾಲಿನಲ್ಲಿ ರೈತರು ಬೆಳೆವ ಅರಿಶಿಣ ಬೆಳೆಯ ಬೆಲೆ ಕುಸಿತವಾದಾಗ ರೈತರ ಬೇಡಿಕೆಗೆ ಮಣಿದ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ರೈತರಿಗೆ ಬೆಂಬಲ ಬೆಲೆ ನೀಡಿ ರೈತರಿಂದ ಅರಿಶಿಣ ಖರೀದಿಸಿತ್ತು. ಅರುಣಾಚಲ ಪ್ರದೇಶದಲ್ಲಿ 2016 -17 ನೇ ಸಾಲಿನಲ್ಲಿ, ಮಿಜೋರಾಂನಲ್ಲಿ 2024ರಲ್ಲಿ ಈ ರೀತಿ ಕನಿಷ್ಠ ಬೆಂಬಲ ಬೆಲೆ ಕೊಟ್ಟು ಶುಂಠಿ ಖರೀದಿ ಮಾಡಲಾಗಿದೆ.
ರಾಜ್ಯದಲ್ಲಿಯೂ ಸಾಕಷ್ಟು ಶುಂಠಿ ಕೃಷಿಕರಿರುವುದರಿಂದ ಬೆಳೆಗಾರರ ಹಿತ ಕಾಪಾಡಲು ರಾಜ್ಯ ಸರ್ಕಾರ ಕೂಡಲೇ ಮಾರುಕಟ್ಟೆ ಮಧ್ಯ ಪ್ರವೇಶ ಮಾಡಿ ರೈತರ ಹಿತ ಕಾಯಬೇಕೆಂದು ಮನವಿ ಪತ್ರದಲ್ಲಿ ರೈತರು ಒತ್ತಾಯಿಸಿದ್ದಾರೆ.
ಕೊಡಗು ಶುಂಠಿ ಕೃಷಿಕರ ಪರವಾಗಿ ಹೆರೂರು ಅರುಣ್ ಚೆಂಗಪ್ಪ, ಏಳನೇ ಹೊಸಕೋಟೆ ಅಶೋಕ್, ವಿರಾಜಪೇಟೆ ಲವ, ನಾಕೂರು ಶಿರಂಗಾಲದ ಚೇತನ್ ಪೊನ್ನಪ್ಪ, ಕಲ್ಲೂರು ಪ್ರಶಾಂತ್, ದೊಡ್ಡತ್ತೂರು ನಾರಾಯಣ, ಮಳೂರು ಪ್ರವೀಣಕುಮಾರ್, ಹೆರೂರು ಧನಪಾಲ್, ಮಾದಾಪಟ್ಟಣ ಮಹದೇವ, ಗುರುಮಲ್ಲೇಶ ಈ ಸಂದರ್ಭ ಇದ್ದರು.