ಪಟ್ಟಣ ಹೊರವಲಯದ ಪಶ್ಚಿಮವಾಹಿನಿ ಸಮೀಪದ ಕಾವೇರಿ ನದಿಯಂಚಿನ ಕೃಷಿ ಭೂಮಿಯ ತೀರದಲ್ಲಿ ದೈತ್ಯ ಮೊಸಳೆ ಕಾಣಿಸಿಕೊಂಡಿರುವುದು. 
ಜಿಲ್ಲೆ

ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ

ಶ್ರೀರಂಗಪಟ್ಟಣ: ಪಟ್ಟಣ ಹೊರವಲಯದ ಪಶ್ಚಿಮವಾಹಿನಿ ಸಮೀಪದ ಕಾವೇರಿ ನದಿ ತೀರದಲ್ಲಿ ದೈತ್ಯ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯ ರೈತಾಪಿ ಜನರಲ್ಲಿ ಆತಂಕ ಎದುರಾಗಿದೆ.

ಕೆಆರ್‌ಎಸ್ ಅಣೆಕಟ್ಟೆ ಮೇಲ್ಭಾಗದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾದ ಕಾರಣ ಡ್ಯಾಂನಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದ್ದು, ಈ ಪ್ರವಾಹದ ನೀರಲ್ಲಿ ರಂಗನತಿಟ್ಟು ಪಕ್ಷಿಧಾಮದಿಂದ ಮೊಸಳೆಯು ಸಹ ಹೊರಬಂದಿದ್ದು, ನದಿ ತೀರದ ಕೃಷಿ ಜಮೀನುಗಳಲ್ಲಿ ತನ್ನ ಸಂಚಾರ ನಡೆಸಿದೆ. ಪಶ್ಚಿಮವಾಹಿನಿ ಸಮೀಪದ ಎಡತಿಟ್ಟು ಹಾಗೂ ರಾಮಕೃಷ್ಣ ಆಶ್ರಮ ನಡುವಿನ ಕಾವೇರಿ ನದಿಯ ತೀರದಲ್ಲಿ ದೈತ್ಯ ಮೊಸಳೆ ಮಲಗಿರುವುದನ್ನು ಕಣ್ಣಾರೆ ಕಂಡ ರೈತ ಪಟ್ಟಣದ ಸೋಮಶೇಖರ್ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಹಾಕಿದ್ದಾರೆ.

ಕಾವೇರಿ ನದಿಯಂಚಿನ ತಮ್ಮ ಕೃಷಿ ಜಮೀನುಗಳಲ್ಲಿ ಪಶುಸಂಗೋಪನೆಯೊಂದಿಗೆ ಕೋಳಿ ಹಾಗೂ ಕುರಿ ಸಾಕಣೆ ಮಾಡುತ್ತಿರುವ ರೈತಾಪಿ ಜನರು ಇದೀಗ ಮೊಸಳೆ ಸಂಚಾರದಿಂದ ಸಾಕಷ್ಟು ಭಯಭೀತಗೊಂಡಿದ್ದು, ಜನ, ಜಾನುವಾರುಗಳ ಮೇಲೆ ದಾಳಿಯಾಗುವ ಮುಂಚೆಯೇ ಮೊಸಳೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.