ಮುಂಡರಗಿ: ಗೃಹಲಕ್ಷ್ಮೀ ಯೋಜನೆ ಜಾರಿ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮ ಒನ್ ಕೇಂದ್ರಗಳಿಗೆ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಅರ್ಜಿ ಸ್ವೀಕಾರ ಕೇಂದ್ರಗಳಲ್ಲಿ ಜನಸಂದಣಿ ಹೆಚ್ಚಿರುವುದು ಕಂಡು ಬರುತ್ತಿದೆ. ಹೀಗಾಗಿ, ತಹಸೀಲ್ದಾರರು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಯೋಜನೆ ಬಗ್ಗೆ ಮಾಹಿತಿ ಮತ್ತು ತಿಳಿವಳಿಕೆ ನೀಡಿದರು.
ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಅಲ್ಲದೆ ಕೇಂದ್ರದವರು ಯಾವುದೇ ಕಾರಣಕ್ಕೂ ಹಣ ಪಡೆಯಬಾರದು. ಅರ್ಜಿ ಸಲ್ಲಿಸುವವರೂ ಹಣ ಕೊಡಬಾರದು. ಒಂದು ವೇಳೆ ಕೇಂದ್ರದಲ್ಲಿ ಹಣ ಪಡೆದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಶೀರನಹಳ್ಳಿ, ಹಮ್ಮಿಗಿ ಗ್ರಾಮದಲ್ಲಿ ಮಳೆಯಿಂದ ಬಿದ್ದ ಎರಡು ಮನೆಗಳನ್ನು ಪರಿಶೀಲಿಸಿದರು. ನಂತರ ಹಮ್ಮಿಗಿ ಸಮೀಪದ ಸಿಂಗಟಾಲೂರು ಬ್ಯಾರೇಜ್‌ನಿಂದ ನದಿಗೆ ನೀರು ಹರಿಬಿಟ್ಟಿದ್ದನ್ನು ವೀಕ್ಷಿಸಿದರು. ಕಂದಾಯ ನಿರೀಕ್ಷಕ ಎಚ್.ಎಂ. ಪಾಟೀಲ, ಗ್ರಾಮ ಲೆಕ್ಕಾಧಿಕಾರಿಗಳಾದ ಲೆಕ್ಯಾನಾಯ್ಕ , ಬಸವರಾಜ ಪೋಲೂರು ಇತರರು ಇದ್ದರು.