ಜಿಲ್ಲೆ

ಗ್ರಾಪಂನಲ್ಲಿ ಮತ್ತೆ ತಲೆ ಎತ್ತಿದ ನಕಲಿ ಖಾತೆ ಭೂತ

ಅಕ್ರಮ ಇ - ಖಾತೆ ಹಗರಣ ಮತ್ತೆ ಸದ್ದು !

* ಭೂ ಮಾಫಿಯಾ ವ್ಯಾಪಕವಾಗಿರುವ ಮುನ್ಸೂಚನೆ

* ಕೊಟ್ಟಗಾಳು ಗ್ರಾಪಂನಲ್ಲಿ ಪಿಡಿಒ ಡಿಜಿಟಲ್ ಸಹಿ ಅಕ್ರಮ ಬಳಕೆ?

* ಸೈಬರ್ ಪೊಲೀಸರಿಗೆ ದೂರು

ಗಂಗಾಧರ್ ಬೈರಾಪಟ್ಟಣ ರಾಮನಗರ

ಕಳೆದ ಎರಡು ವರ್ಷಗಳ ಹಿಂದೆ ರಾಮನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಕೇಳಿ ಬಂದಿದ್ದ ಅಕ್ರಮ ಇ - ಖಾತೆ ಹಗರಣ ಮತ್ತೆ ಜಿಲ್ಲೆಯಲ್ಲಿ ಸದ್ದುಮಾಡಿದೆ. ಪ್ರತಿಷ್ಠಿತ ಕೈಗಾರಿಕಾ ಪ್ರದೇಶ ಹಾರೋಹಳ್ಳಿಗೆ ಹತ್ತಿರದಲ್ಲಿಯೇ ಇರುವ ಕೊಟ್ಟಗಾಳು ಗ್ರಾಮ ಪಂಚಾಯಿತಿಯಲ್ಲಿ 21 ನಿವೇಶನಗಳನ್ನು ಪಿಡಿಒ ಡಿಜಿಟಲ್ ಸಹಿಯನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡು ಇ - ಖಾತೆಯನ್ನು ನೀಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಅಲ್ಲಿನ ಪಿಡಿಒ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಬಹುತೇಕ ತಣ್ಣಗಾಗಿದ್ದ ಜಾಲ ಮತ್ತೆ ಚುರುಕು ಪಡೆದುಕೊಂಡಿರುವುದು ಭೂ ಮಾಫಿಯಾ ವ್ಯಾಪಕವಾಗಿರುವ ಮುನ್ಸೂಚನೆ ನೀಡಿದೆ.

ಈಗ ಏನಾಗಿದೆ?:

ಹಾರೋಹಳ್ಳಿ ತಾಲೂಕು ಕೊಟ್ಟಗಾಳು ಗ್ರಾಪಂ ಪಿಡಿಒ ಡಿಜಿಟಲ್ ಸಹಿಯನ್ನು ಬಳಸದೇ ಗೊಲ್ಲಹಳ್ಳಿಯಲ್ಲಿ 21 ನಿವೇಶನಗಳಿಗೆ ಫಾರ್ಮ್ 11 ಬಿ ಖಾತೆ ನೀಡಲಾಗಿದೆ. ಸ್ಥಳೀಯ ಪಿಡಿಒ ಡಿಜಿಟಲ್ ಸಹಿ ಮಾಡದೆ, ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಆಗದೆ, ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆದುಕೊಂಡಿಲ್ಲ. ಮತ್ತೊಂದೆಡೆ ಇಷ್ಟೂ ನಿವೇಶನಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಡಿಮಾಂಡ್ ರಿಜಿಸ್ಟರ್‌ನಲ್ಲಿ ದಾಖಲು ಮಾಡದಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಈ ಸಂಬಂಧ ಸೈಬರ್ ಪೊಲೀಸರಿಗೆ ಪಿಡಿಒ ದೂರು ನೀಡಿದ್ದಾರೆ.

ಹಿಂದೆಯೂ ನಡೆದಿತ್ತು

2021ರ ಸೆ.17ರಿಂದ 21ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಪಂ ಪಿಡಿಒ ಮತ್ತು ಇಒ ಅವರ ಇ-ಸ್ವತ್ತು ಲಾಗಿನ್ ಐಡಿಯನ್ನು ಹ್ಯಾಕ್ ಮಾಡಿ 36 ಕಂದಾಯ ಸೈಟುಗಳಿಗೆ ಇ-ಖಾತಾ ವಿತರಿಸಲಾಗಿತ್ತು. ಈ ಕುರಿತು ದೇವನಹಳ್ಳಿ ತಾಪಂ ಇಒ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ತನಿಖೆ ನಡೆಸಿದ ಪೊಲೀಸರು ಹಾರೋಹಳ್ಳಿಯು ಗ್ರಾಪಂ ಆಗಿದ್ದ ವೇಳೆ, ಅಲ್ಲಿನ ಅಧ್ಯಕ್ಷ ಗುರುಪ್ರಸಾದ್ ಅವರ ಡಾಂಗಲ್ ಮೂಲಕವೇ ದೇವನಹಳ್ಳಿ ಬಳಿ ಇ-ಖಾತೆಗಳು ನಡೆದಿದ್ದವು. ಇದಲ್ಲದೆ, ಬೆಂಗಳೂರು ದಕ್ಷಿಣ ತಾಲೂಕಿನ ತರಳು, ಸೋಮನಹಳ್ಳಿ, ಕುಂಬಳಗೋಡು ಗ್ರಾಮ ಪಂಚಾಯಿತಿ ಸೇರಿ ಹಲವೆಡೆ ಸಹ ಇ-ಸ್ವತ್ತು ತಂತ್ರಾಂಶ ದುರುಪಯೋಗ ಪಡಿಸಿಕೊಂಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದ್ದವು.

ದೇವನಹಳ್ಳಿಯಲ್ಲಿ ಆರಂಭಗೊಂಡ ಅಕ್ರಮ ಇ - ಖಾತೆ ವಿಚಾರಣೆ ರಾಮನಗರಕ್ಕೂ ವ್ಯಾಪಿಸಿ ರಾಮನಗರ ಜಿಲ್ಲೆಯೊಂದರಲ್ಲಿಯೇ 5 ಸಾವಿರಕ್ಕೂ ಹೆಚ್ಚಿನ ಇ-ಖಾತೆಗಳು ಅಕ್ರಮವಾಗಿ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ, ಇದು ರಾಜ್ಯಾದ್ಯಂತ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ ಮಾಡಿತ್ತು.

ತನಿಖೆ ಪ್ರಗತಿ ಮಾಹಿತಿ ಇಲ್ಲ

ಮತ್ತೊಂದೆಡೆ ಅಕ್ರಮ ಇ- ಖಾತೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ಸರ್ಕಾರ ಪ್ರಕರಣದ ಗಂಭೀರತೆಯನ್ನು ಗಮನಿಸಿ ತನಿಖೆ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿತ್ತು. ಆದರೆ, ಸಿಐಡಿ ತನಿಖೆ ಆರಂಭಗೊಂಡು ಬಹುತೇಕ ಎರಡು ವರ್ಷಗಳು ಕಳೆದರೂ ಈವರೆವಿಗೂ ತನಿಖೆ ಪ್ರಗತಿ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಜಿಲ್ಲೆಯ ಅಧಿಕಾರಿಗಳು ಮಾಹಿತಿ ಕೋರಿದರೂ, ತನಿಖೆ ಪ್ರಗತಿಯಲ್ಲಿದೆ ಎನ್ನುವ ಮಾಹಿತಿಯಷ್ಟೇ ಸಿಐಡಿಯಿಂದ ಹೊರ ಬರುತ್ತಿದೆ ಎಂದು ಹೇಳಲಾಗುತ್ತಿದೆ.

ಎಚ್ಚರ ಅಗತ್ಯ

ಬೆಂಗಳೂರು ಸೇರಿ ಸುತ್ತ ಮುತ್ತಲ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಾರ್ಗದಲ್ಲಿ ಆದರೂ ಭೂಮಿ ಖರೀದಿ ಮಾಡಬೇಕು, ಇಲ್ಲ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಬೇಕು ಎನ್ನುವ ಮಾಫಿಯಾ ಮುಂದಾಗಿರುವ ಕಾರಣ ವ್ಯವಸ್ಥೆಯ ಒಳಗಿರುವವರನ್ನೇ ಬಳಕೆ ಮಾಡಿಕೊಂಡು, ಇಲ್ಲವೇ ಸೈಬರ್ ಪರಿಣಿತರ ಮೂಲಕ ಅಕ್ರಮ ಖಾತೆಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಂತ್ರಾಂಶವನ್ನು ಮತ್ತಷ್ಟು ಸುರಕ್ಷಿತಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ಹರೀಸಂದ್ರದಲ್ಲೂ ಪ್ರಯತ್ನ

ಕಳೆದ ಕೆಲವು ತಿಂಗಳ ಹಿಂದೆ ರಾಮನಗರ ತಾಲೂಕಿನ ಹರೀಸಂದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿಯ ಇ - ಸ್ವತ್ತು ಲಾಗಿನ್ ಅನ್ನು ದುರ್ಬಳಕೆ ಮಾಡಲು ಯತ್ನಿಸುವ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಅಂದಿನ ಪಿಡಿಒ ದಾಯನಂದ ಸಾಗರ್ ಎನ್ನುವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ದಯಾನಂದ ಸಾಗರ್ ಅವರ ಲಾಗಿನ್ ಐಡಿಯ ಮೂಲಕ ಇ- ಸ್ವತ್ತು ತಂತ್ರಾಂಶಕ್ಕೆ ಪ್ರವೇಶ ಮಾಡಲು, ವಾರದಲ್ಲಿ 2 ದಿನ ಪ್ರಯತ್ನ ಮಾಡಿ, ಗರಿಷ್ಠ ಲಾಗಿನ್ ಮಿತಿ ಬಳಕೆ ಮಾಡಿ ವಿಫಲವಾಗಿರುವುದು ಕಂಡು ಬಂದಿತ್ತು. ಅನಾಮದೇಯ ವ್ಯಕ್ತಿಗಳು ಲಾಗಿನ್ ಐಡಿಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಗ್ಗೆ ಅನುಮಾನ ಮೂಡಿ, ದೂರು ನೀಡಿದ್ದರು.

ಗೊಲ್ಲಹಳ್ಳಿಯಲ್ಲಿ ಅಕ್ರಮ ಇ- ಖಾತೆ ನೀಡಿರುವ ಬಗ್ಗೆ ಪಿಡಿಒ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಪೂರ್ಣಗೊಂಡ ನಂತರವಷ್ಟೇ ಅಕ್ರಮ ಹೇಗೆ ನಡೆದಿದೆ ಎನ್ನುವ ಬಗ್ಗೆ ಮಾಹಿತಿ ದೊರೆಯಲಿದೆ. ಅಕ್ರಮಗಳು ನಡೆಯದಂತೆ ಎಚ್ಚರವಹಿಸಲು ನಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ. ದಿಗ್ವಿಜಯ್ ಬೋಡ್ಕೆ ಸಿಇಒ, ಜಿಪಂ ರಾಮನಗರ