ಯಳಂದೂರು ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ 5 ನೇ ತರಗತಿ ವಿದ್ಯಾರ್ಥಿಗೆ ಇಲ್ಲಿನ ಶಿಕ್ಷಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಕ್ರಮದ ವಿರುದ್ಧ ಬುಧವಾರ ಚಾಮಲಾಪುರ ಗ್ರಾಮಸ್ಥರು ವಾಗ್ವಾದ ನಡೆಸುತ್ತಿರುವುದು. 
ಜಿಲ್ಲೆ

ಎಸ್‌ಡಿವಿಎಸ್ ಆಡಳಿತ ಮಂಡಳಿಗೆ ಘೇರಾವ್

 ಯಳಂದೂರು : ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗೆ ಮಂಗಳವಾರ ಇಲ್ಲಿನ ಶಿಕ್ಷಕಿ ಥಳಿಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವಿರುದ್ಧ ಗ್ರಾಮಸ್ಥರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳ ಮಹಜರು ನಡೆಸಲು ಪೊಲೀಸರೊಂದಿಗೆ ಬಂದ ಬಾಲಕನ ಪಾಲಕರು, ಗ್ರಾಮಸ್ಥರು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಘೇರಾವ್ ಹಾಕಿದರು. ಶಾಲೆಯಲ್ಲಿ ಮಕ್ಕಳಿಗೆ ಥಳಿಸುವ, ಮಾರಣಾಂತಿಕ ಹಲ್ಲೆ ಮಾಡುವಂತಿಲ್ಲ. ಮಗುವಿನ ಪ್ರಾಣಕ್ಕೆ ಆಗಬೇಕಿದ್ದ ಸಂಚಕಾರ ಅಲ್ಪದರಲ್ಲೇ ತಪ್ಪಿದೆ. ಈ ಶಾಲೆಯಲ್ಲಿ ಹಲವು ಲೋಪಗಳಿವೆ, ಸರ್ಕಾರದ ನೀತಿ, ನಿಮಯಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಇಲ್ಲಿರುವ ಶಿಕ್ಷಕರ ವಿದ್ಯಾರ್ಹತೆ ಬಗ್ಗೆಯೂ ಅನುಮಾನವಿದೆ. ಇಲ್ಲಿ ಹಲವು ಸಮಸ್ಯೆಗಳಿವೆ. ಆಗಾಗ್ಗೆ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇಲ್ಲಿ ನೀತಿ, ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಕಿಡಿಕಾರಿದರು. ನಂತರ ಪೊಲೀಸರು ಬಂದು ವಾತಾವರಣವನ್ನು ತಿಳಿಗೊಳಿಸಿದರು.

ಡಿಡಿ ಭೇಟಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಚಂದ್ರಹಾಸ್ ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಮಲಾಪುರ ಗ್ರಾಮದ ಶಿವಕುಮಾರ್ ಅವರ ಮಗ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗುರುಪ್ರಸಾದ್‌ನ ತೊಡೆ, ಕೈ, ಹೊಟ್ಟೆಯ ಭಾಗಕ್ಕೆ ಶಿಕ್ಷಕಿ ಭಾನುಮತಿ ಎಂಬುವರು ಥಳಿಸಿ ತೀವ್ರ ಗಾಯಗೊಳಿಸಿದ್ದರು. ಈತನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಾಲೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಕಿ ವಿದ್ಯಾರ್ಥಿಗೆ ಥಳಿಸಿರುವುದು ತಿಳಿದುಬಂದಿದೆ. ಶಿಕ್ಷಕಿಯನ್ನು ನೇಮಕಾತಿ ಮಾಡಿಕೊಳ್ಳದೆ ಒಂದು ರಿಜಿಸ್ಟರ್‌ನಲ್ಲಿ ನಮೂದಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಹಲವು ವಿದ್ಯಾರ್ಥಿಗಳಿಗೆ ಈ ಶಿಕ್ಷಕಿ ಥಳಿಸಿರುವ ಬಗ್ಗೆ ದೂರುಗಳಿವೆ. ಇಲ್ಲಿ ಸಿಸಿ ಕ್ಯಾಮರಾ ಸಹ ಕೆಲಸ ಮಾಡುತ್ತಿಲ್ಲ. ಇಲ್ಲಿ ಶೌಚಗೃಹದ ವ್ಯವಸ್ಥೆಯೂ ಸರಿಯಾಗಿಲ್ಲ ಎಂಬುದರ ಬಗ್ಗೆ ದೂರಿದೆ. ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿ. ಮಲ್ಲಿಕಾರ್ಜುನಸ್ವಾಮಿ ಅವರಿಗೆ ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸುವಂತೆ ಸೂಚನೆ ನೀಡಲಾಗಿದೆ. ಇನ್ನಷ್ಟು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಬಿಆರ್‌ಸಿ ನಂಜುಂಡಯ್ಯ, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಸಿದ್ದರಾಜು, ಮಂಗಳಮ್ಮ, ನಾಗರಾಜು ಸೇರಿದಂತೆ ಅನೇಕರು ಇದ್ದರು.