ಹಾವೇರಿ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಆಯಾ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಾವೇರಿಯ ದೇವಗಿರಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೆ. 25ರಂದು ಮೊದಲ ಜನತಾ ದರ್ಶನ ನಿಗದಿಯಾಗಿದೆ. ಬರಗಾಲ, ನೀರಿನ ಸಮಸ್ಯೆ, ಸೇರಿದಂತೆ ಸಾಲು ಸಾಲು ಸಮಸ್ಯೆಗಳ ಸುಳಿಯಲ್ಲಿ ಜಿಲ್ಲೆ ನಲುಗಿ ಹೋಗಿದೆ. ರೈತ ಸಂಘಟನೆಗಳು ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದು, ಮೊದಲ ಜನತಾ ದರ್ಶನವೇ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿರುವ ಉಸ್ತುವಾರಿ ಮಂತ್ರಿ ಶಿವಾನಂದ ಪಾಟೀಲ ರೈತರಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಿಡುವುದಿಲ್ಲ ಎಂದು ರೈತ ಸಂಘಟನೆಗಳು ಈಗಾಗಲೇ ಎಚ್ಚರಿಕೆ ನೀಡಿವೆ. ಇದೀಗ ಹಾವೇರಿಯಲ್ಲಿ ಜರುಗುವ ಜನತಾ ದರ್ಶನ ಕಾರ್ಯಕ್ರಮಕ್ಕೆ ಘೇರಾವ್ ಹಾಕಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು, ಸಂಸದರಿಗೆ ರೈತರ ಬಗ್ಗೆ ಯಳ್ಳಷ್ಟೂ ಕಾಳಜಿ ಇಲ್ಲ. ಜಿಲ್ಲೆಯ ವಿವಿಧೆಡೆ ರೈತರು ಪ್ರತಿಭಟನೆ ನಡೆಸಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೊಷಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ಇನ್ನೂತನಕ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪಟ್ಟಿಗೆ ಸೇರ್ಪಡೆ ಮಾಡಿಲ್ಲ. ಹೀಗಾಗಿ, ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವರಿಗೆ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಕಾರ್ಯಕ್ರಮಕ್ಕೆ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದ್ದು, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮುಜುಗರಕ್ಕೀಡಾಗುವ ಸಂಭವವಿದೆ. ಜಿಲ್ಲಾಡಳಿತ ಈಗಾಗಲೇ ಸೂಕ್ತ ತಯಾರಿ ಮಾಡಿಕೊಂಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆ ಆರಂಭಿಸಿದೆ.
ಜಿಲ್ಲೆಯಲ್ಲಿ ಸೂಕ್ತ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯಲು ಶುದ್ಧವಾದ ನೀರು, ಒಳಚರಂಡಿ ವ್ಯವಸ್ಥೆಯನ್ನೂ ಹೊಂದದ ಜಿಲ್ಲಾ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ರಸ್ತೆ, ವಿದ್ಯುತ್, ಸಾರಿಗೆ ಸಂಪರ್ಕ ಇಲ್ಲದೇ ಜನ ನಲುಗಿ ಹೋಗಿದ್ದಾರೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಎಲ್ಲ ಫಲಾನುಭವಿಗಳ ಕೈ ಸೇರುತ್ತಿಲ್ಲ. ಈ ಎಲ್ಲ ಸವಾಲುಗಳ ಸುಳಿಯಲ್ಲಿ ಸಚಿವರು ಜನತಾ ದರ್ಶನವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕೌತುಕ ಮೂಡಿದೆ. ಈ ಮೂಲಕವಾದರೂ ಒಂದಷ್ಟು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿ ಎಂಬ ಆಶಾಭಾವವೂ ಇದೆ.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಹಲವೆಡೆ ಅನ್ನದಾತರು ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಹರಗುತ್ತಿದ್ದಾರೆ. ಒಂದು ತಿಂಗಳು ತಡವಾಗಿ ಬಿತ್ತನೆ ಮಾಡಿದ್ದರೂ ನಂತರ ಮತ್ತೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದಾರೆ. ಆದರೂ ರೈತರ ಕೈಗೆ ಫಸಲು ಬರುವ ನಿರೀಕ್ಷೆ ಇಲ್ಲ. ಹೀಗಾಗಿ ಸಂಪೂರ್ಣ ಜಿಲ್ಲೆಯನ್ನು ಬರ ಎಂದು ಘೊಷಿಸುವಂತೆ ರೈತರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದ್ದರು. ಆದರೆ, ರಾಜ್ಯ ಸರ್ಕಾರದ ಬರಪಟ್ಟಿಯಲ್ಲಿ ಜಿಲ್ಲೆಯ ಹಾನಗಲ್ಲ, ಬ್ಯಾಡಗಿ ಹಾಗೂ ಶಿಗ್ಗಾಂವಿ ತಾಲೂಕನ್ನು ಸೇರ್ಪಡೆ ಮಾಡಿಲ್ಲ. ಹೀಗಾಗಿ ತಾಲೂಕಿನ ರೈತರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.
ಜನರ ಸಮಸ್ಯೆ, ಕುಂದು-ಕೊರತೆ ನಿವಾರಿಸುವ ನಿಟ್ಟಿಯಲ್ಲಿ ಜನತಾ ದರ್ಶನ ಆಯೋಜಿಸಲಾಗಿದೆ. ರೈತರ, ಸಾರ್ವಜನಿಕರ ಹಲವು ತೊಂದರೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುವುದು. ಉಳಿದ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲಾಗುವುದು. ಉಳಿದ ತಾಲೂಕುಗಳಲ್ಲೂ ಬರ ಘೊಷಣೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದ್ದರಿಂದ ರೈತರು ಸಭೆಯಲ್ಲಿ ಪ್ರತಿಭಟನೆ ಮಾಡಬಾರದು. | ರಘುನಂದನ ಮೂರ್ತಿ, ಜಿಲ್ಲಾಧಿಕಾರಿ