ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯಲ್ಲಿ ಮಳೆ ತಗ್ಗಿ ರೈತರು ನಿಟ್ಟುಸಿರು ಬಿಡುವ ಹೊತ್ತಿಗೆ `ನೆರೆ'ಯ ಮಹಾರಾಷ್ಟçದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಉಜನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಭೀಮಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.ಇದರಿಂದಾಗಿ ತೀರದಲ್ಲಿರುವ ಕಲಬುರಗಿ,ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ ಹಳ್ಳಿಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ಭೀಮೆ ಮತ್ತೊಮ್ಮೆ ಕೆಂಪಾಗಿದ್ದು ನದಿಪಾತ್ರದ ಜನರು ಆತಂಕಗೊAಡಿದ್ದಾರೆ. ಜಿಲ್ಲಾಡಳಿತ ಪ್ರವಾಹ ಸ್ಥಿತಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ ೧.೮೧ ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಬಿಡುತ್ತಿರುವುದರಿಂದ ಸುಕ್ಷೇತ್ರ ದೇವಲಗಾಣಗಾಪುರ ಹಾಗೂ ಘತ್ತರಗಿ ಸೇತುವೆಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ. ಇದರಿಂದಾಗಿ ಅಲ್ಲಿಂದ ಜೇವರ್ಗಿ ಮತ್ತು ಸಿಂದಗಿ ತಾಲೂಕುಗಳ ಕೆಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಮಣ್ಣೂರ ಗ್ರಾಮದ ಆರಾಧ್ಯ ದೈವವಾಗಿರುವ ಯಲ್ಲಮ್ಮದೇವಿ ದೇವಾಲಯ ಭೀಮಾ ಪ್ರವಾಹದಲ್ಲಿ ಬಹುತೇಕ ಮುಳುಗಡೆಯಾಗಿದೆ. ಭಕ್ತರ ದರ್ಶನ ಮತ್ತು ಪೂಜೆ ತಾತ್ಕಾಲಿಕವಾಗಿ ನಿಂತಿವೆ. ಎರಡು ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಿಜಯಪುರ, ಸಿಂದಗಿ,ಜೇವರ್ಗಿ ಮಾರ್ಗವಾಗಿ ಗಾಣಗಾಪುರ ಮತ್ತು ಘತ್ತರಗಿಗೆ ಬರುವರು ಸುತ್ತುಹೊಡೆದು ಅಫಜಲಪುರ ಮಾರ್ಗವಾಗಿ ಬರಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಜಿಲ್ಲೆಯ ಶಿವಪುರ, ಇಟಗಾ ಸೇರಿದಂತೆ ಹಲವು ಹಳ್ಳಿಗಳ ಜಮೀನಿಗೆ ಭೀಮೆ ನುಗ್ಗಿದ್ದಾಳೆ. ಬೆಳೆಯಲಾಗಿದ್ದ ಹತ್ತಿ,ಹೆಸರು,ಮೆಣಸಿನಕಾಯಿ,ಕಬ್ಬು ಮೊದಲಾದ ಬೆಳೆಗಳು ನೀರು ಪಾಲಾಗಿವೆ. ನದಿ ಪಾತ್ರದಲ್ಲಿದ್ದ ಪಂಪ್‌ಸೆಟ್‌ಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಕೆಲವು ಹಳ್ಳಿಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿ, ನದಿಪಾತ್ರದಲ್ಲಿ ರೆಡ್ ಅಲರ್ಟ್ ಘೋಷಿಸಿ ಜಿಲ್ಲಾಡಳಿತ ನಿಗಾ ಇರಿಸಿದೆ.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್,ಸಿಇಒ ಭಂವರಸಿAಗ್ ಮೀನಾ,ಎಸ್ಪಿ ಅಡ್ಡೂರು ಶ್ರೀನಿವಾಸುಲು,ಸಹಾಯ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಹಸೀಲ್ದಾರ ಸಂಜೀವಕುಮಾರ ದಾಸರ ಇನ್ನಿತರ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ತುರ್ತು ಸಭೆ ನಡೆಸಿ, ಪ್ರವಾಹ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಚರ್ಚೆ ನಡೆಸಲಾಯಿತು. ಕಾಳಜಿ ಕೇಂದ್ರ ಆರಂಭಿಸುವುದು ಸೇರಿದಂತೆ ಎಲ್ಲ ತಯರಿ ಮಾಡಿಕೊಳ್ಳಲು ಡಿಸಿ ಸೂಚಿಸಿದರು. ಸೊನ್ನ ಮತ್ತು ಘತ್ತರಗಿ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ರಾತ್ರಿಯಿಂದ ಮಹಾರಾಷ್ಟçದಿಂದ ಬರುವ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.