ಜಿಲ್ಲೆ

ಘಟಬಂಧನ್​ನಿಂದ ಸಿಎಂಗೆ ಕೃತಜ್ಞತೆ

ಕೋಲಾರ ಡೆಸ್ಕ್

ಕೋಲಾರ: ಕೋಮುಲ್​ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಘಟಬಂಧನ್​ನ ಶಾಸಕರು ಹಾಗೂ ಕೋಮುಲ್​ ಅಧ್ಯಕ್ಷ ನಂಜೇಗೌಡ ಮತ್ತು ನಿರ್ದೆಶಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಹಕಾರ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕೋಮುಲ್​ ಅಧ್ಯಕ್ಷ ಗಾದಿಗೆ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಧ್ಯೆ ಪೈಪೋಟಿ ಇತ್ತು. ಆದರೆ ಆಯ್ಕೆಯಾಗಿದ್ದ 9 ನಿರ್ದೇಶಕರಲ್ಲಿ ನಂಜೇಗೌಡರ ಪರ ನಾಮಕರಣ ಸದಸ್ಯ ಸೇರಿ 8 ಮಂದಿ ಇದ್ದ ಕಾರಣ ನಂಜೇಗೌಡರು ಅವಿರೋಧ ಆಯ್ಕೆಯಾಗಿದ್ದಾರೆ.

ಭಾನುವಾರ ಕೋಮುಲ್​ ಅಧ್ಯಕ್ಷ ನಂಜೇಗೌಡ, ಶಾಸಕ ಕೊತ್ತೂರು ಮಂಜುನಾಥ್​, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್​ ಅಹ್ಮದ್​, ಎಂಎಲ್​ಸಿ ಅನಿಲ್​ಕುಮಾರ್​ ಸೇರಿ 7 ಮಂದಿ ನಿರ್ದೇಶಕರು ಸಿಎಂ ಭೇಟಿಯಾಗಿ, ಮುಂದೆಯೂ ಡಿಸಿಸಿ ಬ್ಯಾಂಕ್​ಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಡಿಸಿಸಿ ಬ್ಯಾಂಕ್​ನ 3 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಬೇಕಾಗಿದ್ದು, ಕೋರ್ಟ್​ ಮೆಟ್ಟಿಲೇರಿರುವ ಕಾರಣ ಜು.11 ರಂದು 3 ಕ್ಷೇತ್ರಗಳ ಬಗ್ಗೆ ತೀರ್ಪು ಬರುವ ಸಾಧ್ಯತೆ ಇದ್ದು, ನಂತರ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಚುರುಕುಗೊಳ್ಳಲಿದೆ.