ಬೆಂಗಳೂರು: ಪೊಲೀಸ್ ಸಿಬ್ಬಂದಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಕೊಲೆ ಮಾಡಲು ಯತ್ನಿಸಿದ ಘಾನಾ ದೇಶದ ಪ್ರಜೆಯನ್ನು ಕೆಆರ್‌ಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.
ಘಾನಾ ದೇಶದ ಚಿಕ್ಕಬಾಣಸವಾಡಿ ನಿವಾಸಿ ಎಸೈಡು ಮೋರ್ಗನ್ (34) ಬಂಧಿತ.
ಜೂನ್ 25ರಂದು ತಡರಾತ್ರಿ 1.30ರ ಸಮಯದಲ್ಲಿ ನಾಲ್ಕು ಜನ ವಿದೇಶಿ ಪ್ರಜೆಗಳು ಕೆಆರ್‌ಪುರದ ವಾರಣಾಸಿ ಎನ್‌ಕ್ಲೀವ್ ಬಳಿ ಜಗಳ ಮಾಡಿಕೊಂಡು ಕಿರುಚುತ್ತಿದ್ದರು. ರಾತ್ರಿ ಕರ್ತವ್ಯದಲ್ಲಿದ್ದ ಕೆಆರ್‌ಪುರ ಪೊಲೀಸ್ ಠಾಣೆಯ ಸಿಬ್ಬಂದಿ ಅಲ್ಲಿಗೆ ಬಂದು ಏಕೆ ಪರಸ್ಪರ ಜಗಳವಾಡಿಕೊಂಡು ರಸ್ತೆಯಲ್ಲಿ ಕಿರುಚಾಡುತ್ತೀರಾ? ಅಕ್ಕ-ಪಕ್ಕದ ಜನರ ಶಾಂತಿ ಮತ್ತು ನೆಮ್ಮದಿಗೆ ಬಂಗವಾಗುತ್ತದೆಂದು ತಿಳುವಳಿಕೆ ಹೇಳಿದ್ದರು. ನಾಲ್ವರ ಪೈಕಿ 3 ಜನ ಪೊಲೀಸ್‌ರಿಗೆ ಸಾರಿ ಸರ್ ಎಂದು ಹೇಳಿ ತಮ್ಮ ಕಾರಿನಲ್ಲಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಉಳಿದ ಒಬ್ಬ ವಿದೇಶಿ ಆಸಾಮಿಯು ಪೊಲೀಸರ ಜತೆ ವಾದ ಮಾಡುತ್ತಾ ಜಗಳಕ್ಕೆ ನಿಂತು ನಮ್ಮನ್ನು ಕೇಳುವುದಕ್ಕೆ ನೀವು ಯಾರು?ಎಂದು ಪೊಲೀಸರಿಗೆ ‘ಐ ವಿಲ್ ಕಿಲ್ ಯು’ ಎಂದು ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಂತರ ತನ್ನ ಕಾರಿನಲ್ಲಿ ಸ್ವಲ್ಪ ದೂರ ಹೋಗಿ ಪುನಃ ಪೊಲೀಸರ ಕಡೆಗೆ ವಾಪಸು ತನ್ನ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಉದ್ದೇಶ ಪೂರ್ವಕವಾಗಿ ಪೊಲೀಸರ ಚೇತಾ ದ್ವಿಚಕ್ರ ವಾಹನಕ್ಕೆ ಗುದ್ದಿ ಜಖಂಗೊಳಿಸಿದ್ದ.
ಪೊಲೀಸ್ ಸಿಬ್ಬಂದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್:
ನಂತರ ಸಿನಿಮೀಯ ಶೈಲಿಯಲ್ಲಿ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದ. ಕೆಆರ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಯು ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಪೊಲೀಸರ ತಂಡವು ಉತ್ತರ ಪ್ರದೇಶದ ಗ್ರೇಟರ್ ನೊಯ್ಡದ ನೊಡೋಲಾ ಸಿಗ್ಮದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ನಗರಕ್ಕೆ ಕರೆತಂದಿದೆ. ಜತೆಗೆ ಆರೋಪಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ.