ಕಾಸರಗೋಡು: ಗಡಿನಾಡಿನಲ್ಲಿ ಕನ್ನಡಪರ ಹೋರಾಟದ ಪರಂಪರೆ ಮಹತ್ತರವಾದುದು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಲಪಾಡಿಯಲ್ಲಿ ‘ಗಡಿನಾಡ ಕನ್ನಡ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ’ದಲ್ಲಿ ಸಮಾರೋಪ ಭಾಷಣ ಮಾಡಿದರು.
ನಾಡೋಜ ಡಾ.ಕಯ್ಯರ ಕಿಞಣ್ಣ ರೈ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಕನ್ನಡ ಭಾಷೆ ಮೇಲಿನ ಪ್ರೀತಿ, ಕನ್ನಡ ನಾಡು, ನುಡಿ, ಸಂಸ್ಕೃತಿಗಾಗಿ ನಡೆಸಿದ ಹೋರಾಟ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಮಂಜೇಶ್ವರದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಅವರ ಸ್ಮಾರಕ ಗಿಳಿವಿಂಡು ನಿರಂತರ ಕನ್ನಡ ಚಟುವಟಿಕೆಯ ಕೇಂದ್ರವಾಗಿ ಮೂಡಿಬರಬೇಕು ಎಂದರು.
ಕಸಾಪ ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಡಾ.ರಮಾನಂದ ಬನಾರಿ, ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಹಸನಬ್ಬ ಉಳ್ಳಾಲ, ಸಾಹಿತಿ ಪ್ರಮಿಳಾ ಮಾಧವ ಕಾಸರಗೋಡು, ಪತ್ರಕರ್ತ ಪುರುಷೋತ್ತಮ ಪೆರ್ಲ ಅವರನ್ನು ಸನ್ಮಾನಿಸಲಾಯಿತು. ಶಾರದಾ ಸಮೂಹ ಸಂಸ್ಥೆ ಅಧ್ಯಕ್ಷ ಎಂ.ಬಿ.ಪುರಾಣಿಕ್ ಸನ್ಮಾನಿಸಿದರು.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಂದ್ರ ಅಡಿಗ ನೀಲಾವರ, ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಮಾಧವ ಎಂ.ಕೆ., ಗಡಿನಾಡ ಕನ್ನಡ ಉತ್ಸವ ಸಮಿತಿ ಗೌರವಾಧ್ಯಕ್ಷ ಅರಿಬೈಲು ಗೋಪಾಲ ಶೆಟ್ಟಿ, ತಲಪಾಡಿ ಗ್ರಾಪಂ ಅಧ್ಯಕ್ಷ ಟಿ.ಇಸ್ಮಾಯಿಲ್, ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್‌ಲವಿನಾ ಮೊಂತೇರೋ ಉಪಸ್ಥಿತರಿದ್ದರು. ಆಶಾ ದಿಲೀಪ್ ನಿರೂಪಿಸಿದರು. ಡಾ.ಧನಂಜಯ ಕುಂಬಳೆ ವಂದಿಸಿದರು.
ವಿಶೇಷ ಉಪನ್ಯಾಸದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಪ್ರಾಧ್ಯಾಪಕ ಟಿ.ಎ.ಎನ್.ಖಂಡಿಗೆ ‘ಗಡಿನಾಡಿನ ಸಾಹಿತ್ಯ ಪರಂಪರೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಹುಭಾಷಾ ಕವಿಗೋಷ್ಠಿಯಲ್ಲಿ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ‘ಸಾಂಸ್ಕೃತಿಕ ಮತ್ತು ಸಾಮರಸ್ಯದ ಕಥನಗಳು’ ವಿಷಯದ ಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ.ಪಿ.ಎನ್.ಮೂಡಿತ್ತಾಯ ವಹಿಸಿದ್ದರು. ಆಯಿಷಾ ಎ.ಪೆರ್ಲ, ಡಾ.ಯಶುಕುಮಾರ್ ಬಂಟ್ವಾಳ ವಿಷಯ ಮಂಡಿಸಿದರು. ನೃತ್ಯ ಸಂಭ್ರಮ, ಮಿಮಿಕ್ರಿ, ಸಾಹಿತ್ಯ- ಗಾನ- ನೃತ್ಯ ವೈಭವ ಕಾರ್ಯಕ್ರಮ ಜರುಗಿತು.