ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೋಸ್ಟ್ ಸಮೀಪ ರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು. 
ಜಿಲ್ಲೆ

ಪಾದಯಾತ್ರೆಗೆ ಭರದಿಂದ ಸಿದ್ಧತೆ

ಗುಂಡ್ಲುಪೇಟೆ: ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಪರಿಸರವಾದಿಗಳು ಹಾಗೂ ಸಂಘ-ಸಂಸ್ಥೆಗಳು ಭಾನುವಾರ ಹಮ್ಮಿಕೊಂಡಿರುವ ಪಾದಯಾತ್ರೆಗೆ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ.

2018ರಲ್ಲಿ ಸೇವ್ ಬಂಡೀಪುರ ಹೆಸರಿನಲ್ಲಿ ಕೈಗೊಂಡಿದ್ದ ಹೋರಾಟದ ಮಾದರಿಯಲ್ಲಿ ಈ ಬಾರಿಯೂ ಹೋರಾಟ ನಡೆಸಲು ಯೋಜನೆ ರೂಪಿಸಲಾಗಿದೆ. ಹೀಗಾಗಿ ಶನಿವಾರ ಮದ್ದೂರು ಚೆಕ್‌ಪೋಸ್ಟ್ ಸಮೀಪ ರಸ್ತೆಬದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಜೆಸಿಬಿಯಿಂದ ತೆರವುಗೊಳಿಸಿ, ಅಲ್ಲದೆ ಅರಣ್ಯದೊಳಗೆ ರಸ್ತೆ ಬದಿಯಲ್ಲಿ ಬೀಸಾಡಿದ್ದ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ತೆರವು ಮಾಡಲಾಯಿತು.

ಸಸಿಗಳನ್ನು ನೆಡುವ ಅಭಿಯಾನ ನಡೆಸುತ್ತಿರುವ ಮೂಡಗೂರು ಮಠದ ಇಮ್ಮಡಿ ಉದ್ದಾನ ಶ್ರೀಗಳು ಸೇರಿದಂತೆ ಕಾಡಂಚಿನ ಗ್ರಾಮಗಳ ಜನರು, ಸ್ಥಳೀಯ, ಹೊರಗಿನ ಪರಿಸರ ಪ್ರೇಮಿಗಳು, ವಿದ್ಯಾರ್ಥಿಗಳು, ರೈತ ಹಾಗೂ ಕನ್ನಡ ಸಂಘಟನೆಯವರು, ಸ್ವಯಂಸೇವಾ ಸಂಸ್ಥೆಗಳ ಕಾರ್ಯಕತ್ರರು ಹಾಗೂ ಹೆಸರಾಂತ ಪರಿಸರವಾದಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ತಾವೂ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಸುಮಾರು 400 ಜನರು ಭಾಗವಹಿಸುವ ನಿರೀಕ್ಷೆ ಇದೆ.

ಪಾದಯಾತ್ರೆಗೆ ಬರುವವರ ವಾಹನಗಳನ್ನು ನಿಲ್ಲಿಸಲು ಸುಲ್ತಾನ್ ಭತ್ತೇರಿ ರಸ್ತೆಯಲ್ಲಿರುವ ಕಗ್ಗಳದಹುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ 2.5 ಕಿ.ಮೀ. ಅಂತರದಲ್ಲಿರುವ ಮದ್ದೂರು ಚೆಕ್‌ಪೋಸ್ಟ್‌ಗೆ ಪಾದಯಾತ್ರೆ ಮೂಲಕ ಸಾಗುವವರು.

ಪಡಗೂರು ಮಠದಿಂದ ಮಧ್ಯಾಹ್ನ ಎಲ್ಲರಿಗೂ ಕುಡಿಯುವ ನೀರು, ಮಜ್ಜಿಗೆ ಹಾಗೂ ಮೊಸರನ್ನ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.