ಜಿಲ್ಲೆ

ಮೈಸೂರು ದಸರಾ, ಹಂಪಿ ಉತ್ಸವದ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಉತ್ಸವ, ಕಾರ್ಯಕ್ರಮಕ್ಕೆ ಭರದ ಸಿದ್ಧತೆ

Chikkaballapur

ಚಿಕ್ಕಬಳ್ಳಾಪುರ: ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಮತ್ತು ಕಾರ್ಕಳ ಉತ್ಸವ ಮಾದರಿಯಲ್ಲಿ ಹಮ್ಮಿಕೊಂಡಿರುವ ಚಿಕ್ಕಬಳ್ಳಾಪುರ ಉತ್ಸವ ಪೂರ್ವ ಸಿದ್ಧತಾ ಕಾರ್ಯಗಳು ಅಂತಿಮ ಹಂತದಲ್ಲಿವೆ ಎಂದು ಆರೋಗ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರ ಉತ್ಸವವು ಜ.7ರಂದು ಮಧ್ಯಾಹ್ನ 2ಕ್ಕೆ ನಗರದ ಎಂ.ಜಿ.ರಸ್ತೆಯ ಮರಳುಸಿದ್ದೇಶ್ವರ ದೇವಾಲಯದಿಂದ ಮೆರವಣಿಗೆಗೆ ಚಾಲನೆ ನೀಡುವುದರೊಂದಿಗೆ ಆರಂಭವಾಗಲಿದೆ. ಇದರಲ್ಲಿ 3 ಸಾವಿರಕ್ಕೂ ಹೆಚ್ಚು ಕಲಾ ತಂಡಗಳು, ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಬಿಂಬಿಸುವ 21 ಸ್ತಬ್ಧ ಚಿತ್ರಗಳ ಪ್ರದರ್ಶನವು ಮೆರಗು ನೀಡಲಿದ್ದು, ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ವೇದಿಕೆ ಸ್ಥಳದವರೆಗೆ ಮೆರವಣಿಗೆ ಸಾಗಲಿದೆ ಎಂದರು.
ಕಾರ್ಯಕ್ರಮ ವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮುನಿರತ್ನ, ಆನಂದಸಿಂಗ್, ಸುನೀಲ್ ಕುಮಾರ್, ಎಂಟಿಬಿ ನಾಗರಾಜ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಡಿ.ಎಲ್.ನಾಗೇಶ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣ ಮೂರ್ತಿ ಮತ್ತಿತರರು ಇದ್ದರು.

ಗುಂಪು ಕ್ರೀಡೆಗಳಿಗೆ ಚಾಲನೆ
ಈಗಾಗಲೇ ಉತ್ಸವದ ಭಾಗವಾಗಿ ಜಿಪಂ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಗುಂಪು ಕ್ರೀಡೆಗಳಿಗೆ ಚಾಲನೆ ನೀಡಿದ್ದು, ವಿವಿಧ ಕ್ರೀಡಾಕೂಟಗಳಲ್ಲಿ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು 1,301 ಕ್ರೀಡಾ ತಂಡಗಳನ್ನಾಗಿ ರಚಿಸಲಾಗಿದೆ. ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ದಸರಾ ವೈಭವ ರೀತಿಯಲ್ಲಿ ದೀಪಾಲಂಕಾರಗಳಿಂದ ಕಂಗೊಳಿಸಲಿದೆ. ವಿವಿಧ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಕ್ತದಾನ ಶಿಬಿರ, ಆಹಾರ ಮೇಳ, 7 ದಿನ ನಿತ್ಯ ಲಸಿಕಾಕರಣ, ಆರೋಗ್ಯ ಮೇಳ, ಫಲಪುಷ್ಪ, ಗ್ರಾಹಕರ ವಸ್ತುಪ್ರದರ್ಶನ, ಮಾದರಿ ಗ್ರಾಮದ ಆಕೃತಿ ನಿರ್ಮಾಣ, ಸರ್ಕಾರ ಸಾಧನೆಗಳ ವಸ್ತು ಪ್ರದರ್ಶನ, ಊರ ಹಬ್ಬ, ಗಾಳಿಪಟ, ಮಹಿಳೆಯರಿಗೆ ಅಡುಗೆ, ಯಕ್ಷಗಾನ, ಕುಸ್ತಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ವಾರಪೂರ್ತಿ ನಡೆಯಲಿವೆ. ಬಹುಮಾನ ವೆಚ್ಚವೇ 1 ಕೋಟಿ ರೂ. ಆಗಿದ್ದು ಹಸು ಹಾಗೂ ಎತ್ತುಗಳ ಅಲಂಕಾರ, ಎತ್ತಿನಗಾಡಿ ಅಲಂಕಾರ ಸ್ಪರ್ಧೆಗಳ ವಿಜೇತರಿಗೆ ಪ್ರಥಮ ಬಹುಮಾನ ಒಂದು ಲಕ್ಷ ರೂ., ದ್ವಿತೀಯ 75 ಸಾವಿರ ರೂ., ತೃತೀಯ 50 ಸಾವಿರ ರೂ. ನೀಡಲಾಗುತ್ತದೆ ಎಂದರು.

ಭಾಗವಹಿಸಲಿರುವ ಕಲಾವಿದರು
ಉತ್ಸವದಲ್ಲಿ ಖ್ಯಾತ ಸಿನಿಮಾ ನಟರು ಭಾಗವಹಿಸಲಿದ್ದಾರೆ. ಕಿಚ್ಚಸುದೀಪ್, ಉಪೇಂದ್ರ, ರಮೇಶ್ ಅರವಿಂದ್, ರಿಷಬ್ ಶೆಟ್ಟಿ, ಅಕುಲ್ ಬಾಲಾಜಿ, ಧನಂಜಯ್, ವಿಜಯ್ ಪ್ರಕಾಶ್, ಶಂಕರ್ ಮಹದೇವನ್, ಸೋನು ನಿಗಮ್, ಗಣೇಶ್, ಮುರಳಿ, ಅರ್ಜುನ್ ಜನ್ಯ, ವಾಸುಕಿ ವೈಭವ್, ಯೋಗರಾಜ್ ಭಟ್, ಚಂದನ್ ಶೆಟ್ಟಿ, ಅನನ್ಯ ಭಟ್, ರಾಜೇಶ್ ಕೃಷ್ಣನ್, ಕುರಿ ಪ್ರತಾಪ್ ಮತ್ತು ಟಾಲಿವುಡ್‌ನಿಂದ ಜೂನಿಯರ್ ಎನ್.ಟಿ.ಆರ್, ಮಂಗ್ಲಿ ಸೇರಿದಂತೆ ಪ್ರಮುಖ ಕಲಾವಿದರು ಆಗಮಿಸಲಿದ್ದಾರೆ.

ಕ್ಲೀನ್ ಚಿಕ್ಕಬಳ್ಳಾಪುರ
ಉತ್ಸವದ ಹಿನ್ನೆಲೆಯಲ್ಲಿ ಜ.5ರಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳು ಹಾಗೂ ಗ್ರಾಮಗಳಲ್ಲಿ ಕ್ಲೀನ್ ಚಿಕ್ಕಬಳ್ಳಾಪುರ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಅಭಿಯಾನದ ಯಶಸ್ವಿಗೆ ಕೈ ಜೋಡಿಸಬೇಕು ಎಂದು ಸಚಿವರು ಮನವಿ ಮಾಡಿದರು.