ಜಿಲ್ಲೆ

ರೇಬೀಸ್ ತಡೆಗೆ ಲಸಿಕೆ ಹಾಕಿಸಿಕೊಳ್ಳಿ

ನಾಗರಿಕರಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಲಹೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ನಾಯಿ ಹಾಗೂ ಹಾವು ಕಡಿತ ಪ್ರಕರಣಗಳು, ಜನಸಂಖ್ಯೆ ನಿಯಂತ್ರಣಕ್ಕೆ ಸುಧಾರಣಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಲಹೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಝೋನೋಸಿಸ್ ಮತ್ತು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ರೇಬೀಸ್ ಸೋಂಕು ಮಾರಣಾಂತಿಕವಾಗಿದ್ದು ಇದಕ್ಕೆ ನಾಯಿ ಸೇರಿ ಈ ಕಾಯಿಲೆಗೆ ಕಾರಣವಾಗುವ ಪ್ರಾಣಿಗಳ ಕಡಿತಕ್ಕೊಳಗಾದ ತಕ್ಷಣ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು. ಅದರಲ್ಲೂ ಸಾಕು ಪ್ರಾಣಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಸಂಬಂಧಪಟ್ಟ ಮಾಲೀಕರು ಲಸಿಕೆ ಹಾಕಿಸಬೇಕು ಎಂದು ಸೂಚಿಸಿದರು.

ಕಾಯಿಲೆ, ಚಿಕಿತ್ಸೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಶಾಲಾ, ಕಾಲೇಜು, ಗ್ರಾ.ಪಂ, ನಗರಸಭೆ ವ್ಯಾಪ್ತಿಯಲ್ಲಿ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎನ್.ಎನ್.ಮಹೇಶ್ ಕುಮಾರ್, ಡಿಎ್ಡಬ್ಲ್ಯೂಒ ಅಧಿಕಾರಿ ಡಾ.ಚಂದ್ರಶೇಖರ್ ರೆಡ್ಡಿ, ಆರ್.ಸಿಎಚ್‌ಒ ಡಾ.ಜಿ.ವಿ.ಸಂತೋಷ್ ಬಾಬು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ ಎಚ್.ಎನ್.ರಂಗಪ್ಪ ಇದ್ದರು.

ನಾಯಿ, ಹಾವು ಕಡಿತ ಪ್ರಕರಣಗಳು

ಜಿಲ್ಲೆಯಲ್ಲಿ ಪ್ರಸಕ್ತ 2025ನೇ ಸಾಲಿನಲ್ಲಿ ಇಲ್ಲಿಯವರೆಗೂ 5,890 ಜನರಿಗೆ ನಾಯಿ ಕಡಿತ ಪ್ರಕರಣಗಳು ವರದಿಯಾಗಿ, ರೇಬೀಸ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ 404 ಜನರಿಗೆ ಹಾವು ಕಡಿತದ ಪ್ರಕರಣಗಳು ದಾಖಲಾಗಿ, ಇಬ್ಬರು ಮೃತಪಟ್ಟಿದ್ದಾರೆ.

ವಿಶೇಷ ದಿನ ಸ್ಮರಣೆ

ಝೋನೋಸಿಸ್ ಕಾಯಿಲೆಯ ವಿರುದ್ಧ ಮೊದಲ ಬಾರಿಗೆ ಲಸಿಕೆ ಹಾಕಿದ ಸ್ಮರಣಾರ್ಥ ಪ್ರತಿ ವರ್ಷ ಜು.6ರಂದು ಪ್ರಪಂಚದಾದ್ಯಂತ ವಿಶ್ವ ಝೋನೋಸಿಸ್ ದಿನ ಆಚರಿಸಲಾಗುತ್ತದೆ. ಫ್ರೆಂಚ್ ಸೂಕ್ಷ್ಮ ಜೀವಶಾಸ್ತ್ರಜ್ಞ ಲೂಯಿಸ್ ಪಾಶ್ಚರ್ ಮೊದಲು ರೇಬೀಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ರೇಬೀಸ್ ವೈರಾಣುವಿನಿಂದ ಹರಡುವ ಸೋಂಕು. ಸೋಂಕಿರುವ ಪ್ರಾಣಿಗಳ (ನಾಯಿ ಶೇ.97, ಬೆಕ್ಕು ಶೇ.2, ಶೇ.1 ನರಿ, ಮಂಗೂಸ್, ಕುದುರೆ, ಹಸು, ಕುರಿ, ಟಗರು) ಜೊಲ್ಲಿನ ಸಂಪರ್ಕ, ತೆರೆದ ಚರ್ಮ ಮೇಲೆ ನಾಕುವಿಕೆ, ಪರಚುವಿಕೆ ಇಲ್ಲವೇ ಕಚ್ಚಿದಾಗ ಹರಡುತ್ತದೆ. ಇದಕ್ಕೆ ತಕ್ಷಣ ರೇಬೀಸ್ ಇಮ್ಯುನೋಗ್ಲೋಬುಲಿನ್ ಇಲ್ಲವೇ ಆ್ಯಂಟಿ ರೇಬೀಸ್ ಸೀರಂ ಚುಚ್ಚು ಮದ್ದನ್ನು ಹಾಕಿಸಿಕೊಳ್ಳಬೇಕು. ರೇಬೀಸ್ ಕಾಯಿಲೆ ಬಂದ ಮೇಲೆ ಕಾಪಾಡಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎನ್.ಎನ್.ಮಹೇಶ್ ಕುಮಾರ್ ತಿಳಿಸಿದ್ದಾರೆ.

ಹಾವು ಕಡಿತಕ್ಕೆ ಪರಿಹಾರ

ಹಾವುಗಳು ವಿಷಕಾರಿ ಮತ್ತು ವಿಷರಹಿತ ಎರಡೂ ಇದ್ದು, ಇವು ಕಚ್ಚಿದ ಸಂದರ್ಭಗಳಲ್ಲಿ ಹೆದರದೇ ಚಿಕಿತ್ಸೆ ಪಡೆಯಬೇಕು. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಟ್ ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಿ, ಆಸ್ಪತ್ರೆಗೆ ವ್ಯಕ್ತಿಯನ್ನು ತಕ್ಷಣ ದಾಖಲಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಜನಸಂಖ್ಯೆ ನಿಯಂತ್ರಣದ ಕಾಳಜಿ

ಮೊದಲ ಗರ್ಭಧಾರಣೆಗೆ ಹಾಗೂ ನಂತರದ ಯೋಜಿತ ಗರ್ಭಧಾರಣೆಗೆ, ಆರೋಗ್ಯಕರ ದೇಹ, ಮನಸ್ಸು ಮತ್ತು ವಯಸ್ಸು ಅತ್ಯವಶ್ಯಕ ಎಂಬ ಈ ಸಾಲಿನ ಘೋಷ ವಾಕ್ಯದೊಂದಿಗೆ ಜನಸಂಖ್ಯೆ ನಿಯಂತ್ರಣ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಪರಿಣಾಮಕಾರಿ ಚಟುವಟಿಕೆಯ ಮೂಲಕ ಗುರಿ ಸಾಧಿಸಬೇಕು ಎಂದು ಡಿಸಿ ಸಲಹೆ ನೀಡಿದರು. ಜನಸಂಖ್ಯಾ ನಿಯಂತ್ರಣಕ್ಕಾಗಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅನುಸರಿಸಿಕೊಂಡು ಚಿಕ್ಕಕುಟುಂಬವನ್ನು ರೂಪಿಸಿಕೊಳ್ಳಬೇಕು ಎಂದರು.