ಜಿಲ್ಲೆ

ಚಿಕಿತ್ಸೆ ಪಡೆಯಿರಿ, ಆರಾಮದಿಂದಿರಿ

ಮರಿದೇವ ಹೂಗಾರ

ಹುಬ್ಬಳ್ಳಿ: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಹವಾಮಾನ ವ್ಯತ್ಯಾಸದಿಂದ ಜನರಲ್ಲಿ ಕಣ್ಣಿನ ಉರಿ ಊತ (ಕಂಜಂಕ್ಟಿವಿಟಿಸ್) ಕಂಡುಬಂದಿದೆ. ಈ ಹಿನ್ನೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣಾ ವಿಭಾಗ ಕೆಲ ಸಲಹೆಗಳನ್ನು ನೀಡಿದೆ.

ಕಣ್ಣಿನ ಉರಿ ಊತದ ರೋಗಿಗಳಿಗೆ ವೈದ್ಯರು ನೋವು ನಿವಾರಕ ಮಾತ್ರೆ ಮತ್ತು ಕಣ್ಣಿನ ಡ್ರಾಪ್ಸ್, ಚಿಕಿತ್ಸೆ ನೀಡಬೇಕು. ಮೂಗಿನ ಮತ್ತು ಗಂಟಲಿನ ಸೋಂಕು ಇದ್ದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆ ಕೊಡಬೇಕು. ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವ ರೋಗಿಗಳು ಮತ್ತು ಕಣ್ಣಿನ ಉರಿ ಊತ ಇರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ನೀಡಬೇಕು ಎಂದು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.

ಮದ್ರಾಸ್ ಐ ಬಂದವರು ಹೆಚ್ಚಿನ ಜನಸಂದಣಿ ಪ್ರದೇಶಗಳಿಗೆ ಹೋಗುವುದು ಕಡಿಮೆ ಮಾಡಬೇಕು. ಪದೇ ಪದೆ ಕಣ್ಣು ಮುಟ್ಟುವುದು ಕಡಿಮೆ ಮಾಡಬೇಕು. ಸೋಪ್​ನಲ್ಲಿ ಆಗಾಗ ಕೈ ತೊಳೆದುಕೊಳ್ಳಬೇಕು. ಬೇರೆಯವರ ಜತೆ ನಿಕಟ ಸಂಪರ್ಕ ಹೊಂದುವನ್ನು ಕಡಿಮೆ ಮಾಡಬೇಕು. ಉರಿ ಊತ ಕಂಡುಬಂದವರು ಉಪಯೋಗಿಸಿದ ಟವೆಲ್, ತಲೆ ದಿಂಬು ಇತರರು ಉಪಯೋಗಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಈಗಾಗಲೇ ಆಯಾ ಜಿಲ್ಲೆಗಳಲ್ಲಿ ಮದ್ರಾಸ್ ಐ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.

‘‘ಮದ್ರಾಸ್ ಐ’ ಬಂದ ಸಂದರ್ಭದಲ್ಲಿ ಕಣ್ಣಿನ ತಜ್ಞರ ಬಳಿ ಬಂದು ಚಿಕಿತ್ಸೆ ಪಡೆಯಬೇಕು. ಕಾರ್ನಿಯಾಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಔಷಧ ಅಂಗಡಿಗೆ ತೆರಳಿ ತಾವೇ ನೇರವಾಗಿ ಔಷಧ ತೆಗೆದುಕೊಳ್ಳಬಾರದು. ಅಂತೆಯೇ ಗಾಬರಿಗೊಳ್ಳುವ ಅಗತ್ಯವಿಲ್ಲ. ಆದರೂ ಕಣ್ಣು ಅತಿ ಸೂಕ್ಷ ಇಂದ್ರಿಯ’ ಎನ್ನುತ್ತಾರೆ ಕಿಮ್ಸ್​ನ ನೇತ್ರ ತಜ್ಞ ಡಾ. ರಾಜಶೇಖರ ದ್ಯಾಬೇರಿ.