ಎನ್.ಆರ್.ಪುರ: ಸೀ ಶಕ್ತಿ ಸಂಘ, ಸ್ವ ಸಹಾಯ ಸಂಘದ ಮಹಿಳೆಯರು ಸಂಸ್ಥೆಗಳಿಂದ ನೀಡುವ ತರಬೇತಿಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ಹೇಳಿದರು.
ತಾಪಂ ಸಾಮರ್ಥ್ಯ ಸೌಧದಲ್ಲಿ ಬೆಂಗಳೂರಿನ ಕೆಎಸ್‌ಆರ್‌ಎಲ್‌ಪಿಎಸ್, ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್), ತಾಪಂ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆಯಡಿ ನಡೆದ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಅನೇಕ ಉತ್ಪನ್ನಗಳು ದೊರೆಯುತ್ತವೆ. ಆದರೆ ಅವು ಗ್ರಾಮೀಣ ಮಾರುಕಟ್ಟೆಯಲ್ಲಿ ದೊರಕದೆ, ನಗರ ಪ್ರದೇಶಗಳಲ್ಲಿ ಮಾರಾಟವಾಗುತ್ತಿವೆ. ಗ್ರಾಮೀಣ ಭಾಗದ ಉತ್ಪನ್ನಗಳನ್ನು ಹೇಗೆ ತಯಾರಿಸುವುದು, ಅವುಗಳಿಗೆ ಹೇಗೆ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಬೇಕೆಂಬ ಬಗ್ಗೆ ಅರಿವಿರುವುದಿಲ್ಲ. ಆದ್ದರಿಂದಲೇ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವ ಉದ್ಯೋಗದ ಬಗ್ಗೆ ತರಬೇತಿ ಆಯೋಜಿಸಲಾಗುತ್ತದೆ. ಮಹಿಳೆಯರು ಇಂತಹ ತರಬೇತಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಎನ್‌ಆರ್‌ಎಲ್‌ಎಂ ಯೋಜನೆ ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ ಮಾತನಾಡಿ, ಹಲವಾರು ಎನ್‌ಜಿಒಗಳ ಮೂಲಕ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳು ಹಾಗೂ ಅವರ ಜೀವನೋಪಾಯಕ್ಕೆ ಬೇಕಾದ ಅವಶ್ಯಕ ತರಬೇತಿಯಾದ ಉದ್ಯಮಶೀಲತಾಭಿವೃದ್ಧಿ ತರಬೇತಿಯನ್ನು ಸಿಡಾಕ್ ಮೂಲಕ ನೀಡಲಾಗುತ್ತಿದೆ. ತರಬೇತಿಯಲ್ಲಿ ಉತ್ಪನ್ನಗಳ ತಯಾರಿಕೆ, ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಈ ತರಬೇತಿ 6 ದಿನ ನಡೆಯಲಿದ್ದು, ಒಂದು ದಿನ ಕ್ಷೇತ್ರ ಭೇಟಿ ಇರುತ್ತದೆ. ತರಬೇತಿಯಲ್ಲಿ ಮಹಿಳೆಯರು ಚರ್ಚಿಸುವ ಮೂಲಕ ತಮ್ಮಲ್ಲಿ ಇರುವ ಅನುಮಾನ, ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕೆಂದರು.