ಜಿಲ್ಲೆ

ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ಪಡೆದುಕೊಳ್ಳಿ

ರಾಜಣ್ಣ

ಹನೂರು: ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದರ ಮೂಲಕ ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ ಎಂದು ಶಿರಸ್ತೇದಾರ್ ನಾಗೇಂದ್ರ ಸಲಹೆ ನೀಡಿದರು.


ತಾಲೂಕಿನ ಚಿಂಚಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪಿಂಚಣಿ ಅದಾಲತ್ ಸರ್ಕಾರದ ಮಹತ್ವ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಮೂಲಕ ಜನಸ್ನೇಹಿಯಾಗಿದೆ. ಇದರಿಂದ ಅರ್ಜಿಗಳ ವಿಲೇವಾರಿಯೂ ಪಾರದರ್ಶಕವಾಗಿದ್ದು, ಸ್ಥಳದಲ್ಲಿಯೇ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದರು.


ಸಾಮಾಜಿಕ ಭದ್ರತಾ ಯೋಜನೆಗಳಾದ ವಿಕಲಚೇತನ, ವೃದ್ಧಾಪ್ಯ, ವಿಧವಾ ವೇತನ, ಮನಸ್ವಿನ, ಮೈತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳು ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ವಯಸ್ಸಿನ ಆಧಾರದ ಮೇಲೆ ಪಿಂಚಣಿ ಮೊತ್ತ ಹೆಚ್ಚು ಮಾಡಲು ಸಹ ಅವಕಾಶವಿದೆ. ಆದ್ದರಿಂದ ಅರ್ಹ ಫಲಾನುಭವಿಗಳು ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಇದೇ ವೇಳೆ ಸುಮಾರು 30ಕ್ಕೂ ಹೆಚ್ಚು ವೃದ್ಧಾಪ್ಯ ಫಲಾನುಭವಿಗಳು ಪಿಂಚಣಿಯನ್ನು 600 ರೂ.ನಿಂದ 1,200 ರೂ.ಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದರು. ಇದಕ್ಕೆ ಅಗತ್ಯ ದಾಖಲಾತಿ ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದರು.


ಸಭೆಯಲ್ಲಿ ಗ್ರಾಮಸ್ಥರಿಂದ ಒಟ್ಟು 63 ಅರ್ಜಿಗಳು ಸಲ್ಲಿಕೆಯಾದವು. ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿಯನ್ನು ವಿತರಿಸಲಾಯಿತು.
ಗ್ರಾಪಂ ಸದಸ್ಯ ಕುಮಾರ್, ಶಿಕ್ಷಕ ರಾಜು, ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ, ಮುಖಂಡರಾದ ಮಹದೇವಪ್ಪ, ಬಸಪ್ಪ, ಮಹದೇವಮ್ಮ, ನಂಜಮಣಿ, ಶಿವಮ್ಮ ಹಾಗೂ ಇನ್ನಿತರರು ಇದ್ದರು.