ಹನೂರು : ಕೌಶಲ ತರಬೇತಿಯಿಂದ ಸ್ವಉದ್ಯೋಗ ಪಡೆಯುವುದರ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ಅಶೋಕ್ ತಿಳಿಸಿದರು.
ಪ.ಪಂ. ಕಚೇರಿ ಸಭಾಂಗಣದಲ್ಲಿ ಸೋಮವಾರ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಚಿತ್ರದುರ್ಗ ವಾತ್ಸಲ್ಯ ಸೋಷಿಯಲ್ ಆ್ಯಂಡ್ ಕಲ್ಚರಲ್ ಸೊಸೈಟಿ ವತಿಯಿಂದ ಕೌಶಲ ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಈ ಹಿಂದೆ ಸಮಾಜದಲ್ಲಿ ಮಹಿಳೆಯರನ್ನು ಅಡುಗೆ ಕೋಣೆಗೆ ಮಾತ್ರ ಸೀಮಿತಗೊಳಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಮೂಲಕ ಮಹಿಳೆ ಅಬಲೆಯಲ್ಲ, ಸಬಲೆ ಎಂಬುದನ್ನು ತೋರಿಸಿಕೊಟ್ಟಿದ್ದು, ಉತ್ತಮ ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದ್ದರಿಂದ ಮಹಿಳೆಯರು ಕೀಳರಿಮೆ ಬಿಟ್ಟು ಸಾಧನೆ ಮಾಡಲು ಮುಂದಾಗಬೇಕು. ಜತೆಗೆ ಉದ್ಯೋಗ ಬಯಸುವ ಮಹಿಳೆಯರು ಕೌಶಲಾಧಾರಿತ ತರಬೇತಿಯನ್ನು ಪಡೆದುಕೊಳ್ಳಬೇಕು. ಇದರಿಂದ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ. ಜತೆಗೆ ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಬಹುದು. ಈ ದಿಸೆಯಲ್ಲಿ ಮಹಿಳೆಯರು ಕೌಶಲ ತರಬೇತಿ ಪಡೆದಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು. ಸೊಸೈಟಿ ಕಾರ್ಯದರ್ಶಿ ಸೌಮ್ಯಾ, ತರಬೇತಿ ಶಿಕ್ಷಕಿ ಶಾರದಾ, ಪ.ಪಂ. ನೌಕರರಾದ ಜಯಶೀಲಾ ಹಾಗೂ ಇನ್ನಿತರರು ಇದ್ದರು.