ತೀರ್ಥಹಳ್ಳಿಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಡಿವೈಎಸ್‌ಪಿ ಗಜಾನನ ಸುತಾರ್ ರಕ್ತದಾನ ಮಾಡಿದರು.  
ಜಿಲ್ಲೆ

ಜನಪರ ಕಾರ್ಯಗಳಿಂದ ತೃಪ್ತಿ ಲಭ್ಯ

Shivamogga - Desk - Vinayakumar D B

ತೀರ್ಥಹಳ್ಳಿ: ಜೀವ ಉಳಿಸುವ ಕಾರ್ಯಗಳಲ್ಲಿ ರಕ್ತದಾನ ಅತ್ಯಂತ ಪ್ರಮುಖವಾಗಿದೆ. ಮನುಷ್ಯನಿಂದ ಸೃಷ್ಟಿ ಮಾಡಲಾಗದ ವಸ್ತುಗಳಲ್ಲಿ ರಕ್ತವೂ ಒಂದಾಗಿದೆ. ಅಮೂಲ್ಯವಾದ ರಕ್ತವನ್ನು ಮನುಷ್ಯನಿಂದ ಮಾತ್ರ ಸಂಗ್ರಹಿಸಬಹುದಾಗಿದೆ ಎಂದು ಡಿವೈಎಸ್‌ಪಿ ಗಜಾನನ ಸುತಾರ್ ಹೇಳಿದರು.

ಪೊಲೀಸ್ ಇಲಾಖೆಯು ಶಿವಮೊಗ್ಗದ ಆಶಾಜ್ಯೋತಿ ಸ್ವಯಂ ಪ್ರೇರಿತ ರಕ್ತಕೇಂದ್ರದ ಸಹಯೋಗದೊಂದಿಗೆ ಪಟ್ಟಣದ ಯೂನಿಟಿ ಹಾಲ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ, ನಾವು ಮಾಡುವ ಎಲ್ಲ ಒಳ್ಳೆಯ ಕಾರ್ಯಗಳು ಇತರರಿಗೆ ಪ್ರೇರಣೆ ಆಗುತ್ತವೆ. ಅದರಲ್ಲೂ ರಕ್ತದಾನ ಅತ್ಯಂತ ಶ್ರೇಷ್ಠವಾದುದು. ಈಚಿನ ದಿನಗಳಲ್ಲಿ ರಕ್ತದ ಬೇಡಿಕೆಯೂ ಹೆಚ್ಚುತ್ತಿದ್ದು ದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕಿದೆ. ಕಾನೂನು ಪಾಲನೆಯೊಂದಿಗೆ ಜನರ ರಕ್ಷಣೆಗೆ ಬದ್ಧರಾಗಿರುವ ನಮಗೆ ಇಂತಹ ಜನಪರವಾದ ಕಾರ್ಯಗಳಿಂದ ತೃಪ್ತಿಯೂ ದೊರೆಯುತ್ತದೆ ಎಂದರು.
85ನೇ ಬಾರಿಗೆ ರಕ್ತದಾನ ಮಾಡಿದ ಪಟ್ಟಣ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವತ್ಥ ಗೌಡ, ವಿದ್ಯಾರ್ಥಿ ಜೀವನದಲ್ಲಿ ಸಿನಿಮಾ ಒಂದರಲ್ಲಿ ಹೀರೋ ಮಾಡಿದ ರಕ್ತದಾನದಿಂದ ಪ್ರೇರಣೆಗೊಂಡಿರುವ ನಾನು ಈವರೆಗೆ 85 ಬಾರಿ ರಕ್ತದಾನ ಮಾಡಿದ್ದೇನೆ. ಇದರಿಂದ ನನಗೆ ಅತ್ಯಂತ ಸಂತೋಷ ಕೂಡ ದೊರೆತಿದೆ. ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಬೇರೆಯವರಿಗೆ ಅನುಕೂಲವಾಗುವುದರ ಜತೆಗೆ ನಮ್ಮ ಆರೋಗ್ಯದಲ್ಲೂ ಸುಧಾರಣೆಯಾಗುತ್ತದೆ ಎಂದರು.
ಮಾಳೂರು ಪಿಎಸ್‌ಐ ನವೀನ್ ಮಠಪತಿ, ಶಿವಾನಂದ್, ಪಟ್ಟಣ ಠಾಣೆಯ ಪಿಎಸ್‌ಐ ಸುಷ್ಮಾ, ಗಾದಿ ಲಿಂಗಪ್ಪ, ಸಿಬ್ಬಂದಿ ಇದ್ದರು.