ನಾಪೋಕ್ಲು: ಉತ್ತಮ ಆರೋಗ್ಯ ಹೊಂದಿ, ಸಮಾಜ, ಕುಟುಂಬಕ್ಕಾಗಿ ಬದುಕುವುದೇ ನಿಜವಾದ ಜೀವನ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಂದಿನಿ ಆಸ್ಪತ್ರೆಯ ಬೆಳ್ಳಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಎ.ಕೆ. ಸುಬ್ಬಯ್ಯ ಎಜುಕೇಶನ್ ಟ್ರಸ್ಟ್, ಕೊಡವ ಸಮಾಜ ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ ಹಾಗೂ ಶ್ರೀರಾಮ ಟ್ರಸ್ಟ್ ಜಂಟಿಯಾಗಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದಿಂದ ದೊರಕುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಾಹನಗಳಿಗೆ ಹೇಗೆ ಕಾಲಕಾಲಕ್ಕೆ ಸರ್ವೀಸ್ ಮಾಡುತ್ತೇವೆಯೋ ಅದೇ ರೀತಿ ಆಗಿಂದಾಗ್ಗೆ ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವುದೂ ಅಗತ್ಯ ಎಂದು ಕಿವಿಮಾತು ಹೇಳಿದರು.ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ
ಮಾತನಾಡಿ, ನಂದಿನಿ ಆಸ್ಪತ್ರೆ ಕರೊನಾ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಜನ ಮನ್ನಣೆಗೆ ಪಾತ್ರವಾಗಿತ್ತು. ಎಲ್ಲರೂ ಇಂತಹ ಶಿಬಿರಗಳಿಂದ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ, ಹೊದ್ದೂರು ಪಂಚಾಯಿತಿ ಅಧ್ಯಕ್ಷೆ ಎಚ್.ಎ.ಹಂಸ, ನಂದಿನಿ ಆಸ್ಪತ್ರೆಯ ನಿರ್ದೇಶಕ ಹಾಗೂ ಕೊಡವ ಸಮಾಜದ ಸ್ಪೋರ್ಟ್ಸ್ ಆಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವೈದ್ಯರಾದ ಡಾ. ಸುಶ್ರುತ್ ಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ.ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಕುಮಾರ್, ಆರೋಗ್ಯಾಧಿಕಾರಿ ಡಾ.ಕೆ.ಎಂ. ಸತೀಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಡಡಯ್ಯ, ಸ್ಥಾನೀಯ ವೈದ್ಯಾಧಿಕಾರಿ ಡಾ.ಸತೀಶ್, ಮುಖ್ಯ ವೈದ್ಯಾಧಿಕಾರಿ ಡಾ.ಎಚ್.ವಿ.ದೇವದಾಸ್, ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನ ಪ್ರತಿನಿಧಿ ನಿರಂಜನ್ ಶೆಟ್ಟಿ, ಶ್ರೀರಾಮ ಟ್ರಸ್ಟ್ ಶಾಲೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಮತ್ತಿತರರು ಹಾಜರಿದ್ದರು.
ಶಿಬಿರದಲ್ಲಿ ಹೃದಯ ಸಂಬಂಧಿ ಸಮಸ್ಯೆ, ಮೂತ್ರಪಿಂಡ, ನರರೋಗಗಳ ತಪಾಸಣೆ ನಡೆಯಿತು. ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ನಮೋಗ್ರಾಫಿ ಮತ್ತು ಗರ್ಭ ಕೊರಳಿನ ಉಚಿತ ಪರೀಕ್ಷೆ, ಬಿಪಿ, ಇಸಿಜಿ, ಎಕೋ ಸ್ಕಾೃನಿಂಗ್ ಸೌಲಭ್ಯವನ್ನು ನೂರಾರು ಜನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿತ್ತು.