ವಿಜಯಪುರ: ಜಿಲ್ಲಾಡಳಿತದಿಂದ ನ.1ರಂದು ಆಚರಿಸಲಾಗುವ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿ-ಸಿಬ್ಬಂದಿ ಕರ್ತವ್ಯ ನಿಷ್ಠೆಯೊಂದಿಗೆ ಕಡ್ಡಾಯವಾಗಿ ಭಾಗವಹಿಸಿ ಕನ್ನಡಾಭಿಮಾನ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡಿನ ಅತಿ ಮುಖ್ಯವಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿ-ಸಿಬ್ಬಂದಿ, ವಿವಿಧ ಕನ್ನಡ ಪರ ಸಂಘಟನೆಗಳು, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹಾಗೂ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿದ ಅವರು, ಕಾರ್ಯಕ್ರಮದಕ್ಕೆ ಗೈರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಿ, ಗೈರಾದ ಅಧಿಕಾರಿಗಳ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯೋತ್ಸವ ಸಂದೇಶ ತಯಾರಿಗಾಗಿ ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಅ. 25ರೊಳಗಾಗಿ ಸಲ್ಲಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕನ್ನಡ ಭಾಷೆ, ನೆಲ, ಜಲ ಕುರಿತು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಕ್ವೀಜ್ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಿ, ಅತ್ಯುತ್ತಮ 3 ಜಿಲ್ಲಾ ಮಟ್ಟದ ವಿಜೇತರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ನೀಡಲು ತೀರ್ಮಾನಿಸಲಾಯಿತು.
ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಆದೇಶದಂತೆ ನಾಮಫಲಕಗಳು ಶೇ.60 ರಷ್ಟು ಕನ್ನಡ ಭಾಷೆ ಒಳಗೊಂಡಿರಬೇಕು. ಶೇ.40 ರಷ್ಟು ಉಳಿದ ಭಾಷೆಗಳನ್ನು ಬಳಸಲು ಅವಕಾಶವಿದ್ದು, ಅ. 30ರೊಳಗೆ ಜಿಲ್ಲೆಯ ಎಲ್ಲ ನಾಮಫಲಕಗಳು ಕನ್ನಡ ಭಾಷೆಯನ್ನು ಒಳಗೊಂಡಿರಬೇಕು. ಅ.31ರ ನಂತರ ಕನ್ನಡ ಭಾಷೆ ಒಳಗೊಳ್ಳದ ನಾಮಫಲಕಗಳನ್ನು ಮುಟ್ಟುಗೊಲು ಹಾಕಿ, ಸಂಬಂಧಿಸಿದ ಅಂಗಡಿ, ಸಂಸ್ಥೆಗಳ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು. ಅ. 20 ರಂದು ಈ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಂದು ಬೆಳಗ್ಗೆ 10 ಕ್ಕೆ ನಗರದ ಸೋಲಾಪುರ ರಸ್ತೆಯಲ್ಲಿರುವ ಬಂಜಾರಾ ಕ್ರಾಸ್‌ದಿಂದ ಆರಂಭಗೊಳಿಸಿ, ನಗರದ ವಿವಿಧೆಡೆ ಇರುವ ಅಂಗಡಿಗಳಲ್ಲಿ ಕನ್ನಡ ನಾಮಫಲಕಗಳ ಕುರಿತು ಜಾಗೃತಿ ಮೂಡಿಸಲಾಗುವುದೆಂದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಫಯಾಜ್ ಕಲಾದಗಿ, ಸೋಮನಗೌಡ ಕಲ್ಲೂರ, ದೇವೇಂದ್ರ ಮಿರೇಕರ, ಭೀಮರಾಯ ಜಿಗಜಿಣಗಿ, ರಮೇಶ ಕುಲಕರ್ಣಿ, ದಯಾನಂದ ಸಾವಳಗಿ, ದಸ್ತಗೀರ ಸಾಲೋಟಗಿ ಮತ್ತಿತರರಿದ್ದರು.