ಜಿಲ್ಲೆ

ಗುಣಮಟ್ಟದ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಳಾಗಿ

ಜಿ.ಹೆಚ್. ಧನ್ಯಕುಮಾರ್

ಮೂಡಿಗೆರೆ: ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಅಡುಗೆ ಮನೆಗೆ ಸೀಮಿತರಾಗಿದ್ದರು. ಇಂದು ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಉದ್ಯೋಗಿಗಳಾಗಿರುವುದರಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಎಂದು ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಹೇಳಿದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಹೆಣ್ಣು ಮಕ್ಕಳು ಸೀತೆಯಂತೆ ತಾಳ್ಮೆ ವಹಿಸಿ ಶಿಕ್ಷಣ ಪಡೆದರೆ ದೌರ್ಜನ್ಯದ ವಿರುದ್ಧ ಹೋರಾಡಲು ದುರ್ಗಿಯಂತೆ ಶಕ್ತಿ ಬರುತ್ತದೆ. ವಿದ್ಯಾರ್ಥಿನಿಯರು ಅಂಕಗಳಿಸಲು ಮುಗಿಬಿದ್ದು ಶಿಕ್ಷಣ ಮೊಟಕುಗೊಳಿಸಿರುವ ಉದಾಹರಣೆಗಳಿವೆ. ಗುಣಾತ್ಮಕ ಶಿಕ್ಷಣ ಪಡೆದರೆ ಅಂಕಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಅಂಕಕ್ಕಾಗಿ ಹಾತೊರೆಯಬೇಕಿಲ್ಲ ಎಂದರು.

ಹೆಣ್ಣು ಮಕ್ಕಳು ಶಿಕ್ಷಣ ಪಡೆದ ಬಳಿಕ ಉದ್ಯೋಗಕ್ಕಾಗಿ ಪ್ರಯತ್ನ ಪಡಬೇಕು. ಶಿಕ್ಷಣದ ನಂತರ ಸುಮ್ಮನೆ ಮನೆಯಲ್ಲಿ ಕುಳಿತರೆ ಅಡುಗೆ ಮನೆಗೆ ಮೀಸಲಾಗಬೇಕಾಗುತ್ತದೆ. ಪಠ್ಯದ ಜತೆಯಲ್ಲಿ ಕ್ರೀಡಾಕೂಟ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಎಲ್ಲ ವಿಭಾಗಗಳಲ್ಲಿ ವಿದ್ಯಾರ್ಥಿನಿಯರು ಮುಂದೆ ಬರಬಹುದು ಎಂದು ತಿಳಿಸಿದರು.

ಪ್ರಾಚಾರ್ಯ ಎಸ್.ಪೂರ್ಣೇಶ್ ಮಾತಾನಾಡಿ, ಶಿಕ್ಷಣ ಸಂಸ್ಥೆಗಳ ಗುಣಮಟ್ಟ ನಿರ್ಧರಿಸುವುದು ವಾರ್ಷಿಕ ಪರೀಕ್ಷಾ ಫಲಿತಾಂಶ, ಪ್ರತಿ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಶೇ. 100 ಫಲಿತಾಂಶ ಪಡೆಯುವ ಮೂಲಕ ವಿದ್ಯಾರ್ಥಿನಿಯರು ಸಂಸ್ಥೆಯ ಗುಣಮಟ್ಟ ಹೆಚ್ಚಿಸಬೇಕು ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಹಮದ್ ಯಾಕುಬ್, ಗೌರವಾಧ್ಯಕ್ಷ ಹೆಚ್.ಎಸ್.ರವಿ, ಉಪನ್ಯಾಸಕರಾದ ವೈ.ಕೆ.ಪೂರ್ಣಿ, ಡಿ.ವನಜಾಕ್ಷಿ, ಬಿ.ಎ.ದೈವಿಕಾ, ಡಿ.ಬಿ.ಸವಿತಾ ಇತರರಿದ್ದರು.