ಜಿಲ್ಲೆ

ಸವಲತ್ತು ಪಡೆದು ಸಮಾಜದ ಮುಖ್ಯವಾಹಿನಿಗೆ ಬನ್ನಿ

ಹನೂರು: ರಾಮಾಯಣ ಕಾವ್ಯದ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಸಮುದಾಯದ ಜನರು ಸರ್ಕಾರದ ಸವಲತ್ತುಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.


ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣ ಪ್ರಪಂಚದ ಅತ್ಯುನ್ನತ ಮಹಾಕಾವ್ಯಗಳಲ್ಲಿ ಒಂದು. ಇದರಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ವಿಫುಲವಾದ ಅಂಶಗಳು ಅಡಗಿವೆ. ಇದು ಉತ್ತಮ ಸಮಾಜಕ್ಕೆ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಮಹರ್ಷಿ ವಾಲ್ಮೀಕಿ ಅವರು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಹಾಗಾಗಿ ಪ್ರತಿಯೊಬ್ಬರೂ ರಾಮಾಯಣದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆಯೇ ಈ ಬಗ್ಗೆ ಯುವ ಪೀಳಿಗೆಗೆ ತಿಳಿಸುವಂತಹ ಕೆಲಸವಾಗಬೇಕು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜತೆಗೆ ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳಲು ಮುಂದಾಗಬೇಕು. ಇದರಿಂದ ಸಮುದಾಯ ಅಭಿವೃದ್ಧಿ ಹೊಂದಬಹುದಾಗಿದೆ ಎಂದು ತಿಳಿಸಿದರು.


ಇದಕ್ಕೂ ಮೊದಲು ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಗೆ ಶಾಸಕರು ಚಾಲನೆ ನೀಡಿದರು. ಬಳಿಕ ಮಹದೇಶ್ವರಬೆಟ್ಟದ ಮುಖ್ಯ ರಸ್ತೆಯು ಮೂಲಕ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಯುವಕರು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.


ವಾಲ್ಮೀಕಿ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಪುಟ್ಟವೀರನಾಯ್ಕ, ಕೊಳ್ಳೇಗಾಲ ನಾಯಕ ಸಮಾಜದ ಅಧ್ಯಕ್ಷ ಜಗದೀಶ್, ಮುಖ್ಯ ಭಾಷಣಾಕಾರ ರಾಧಾ ಉದ್ದನೂರು, ಪಪಂ ಸದಸ್ಯರಾದ ಮಹೇಶ್‌ನಾಯ್ಕ, ಆನಂದ್, ಮಹೇಶ್, ಮುಖಂಡರಾದ ಕೊಪ್ಪಾಳಿ ಮಹದೇವನಾಯ್ಕ, ಸೋಮಣ್ಣ, ರಾಜಣ್ಣ ಮತ್ತಿತರರಿದ್ದರು.