ಜಿಲ್ಲೆ

ತುಮಕೂರಿನಲ್ಲಿ ಎಣ್ಣೆ ಸಿಗುತ್ತೆ, ಆದ್ರೆ ಷರತ್ತು ಅನ್ವಯ

Tumakuru

ತುಮಕೂರು: ನಗರದ ಎರಡು ಕಂಟೇನ್ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ವೈನ್ ಶಾಪ್ ಸೇರಿ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಜಿಲ್ಲಾಡಳಿತದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ತುಮಕೂರು ನಗರದಲ್ಲಿ ಕೋವಿಡ್-19 ವೈರಾಣು ನಿಯಂತ್ರಣ ಮತ್ತು ಸಡಿಲಿಕೆ ಕುರಿತ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದರು. ದೈಹಿಕ ಅಂತರ ಕಾಪಾಡಿ ಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಜನಜಂಗುಳಿ ನಿಯಂತ್ರಣದೊಂದಿಗೆ ಅಂಗಡಿಗಳ ಮಾಲೀಕರು ಮತ್ತು ವರ್ತಕರು ಸ್ವಯಂ ಜವಾಬ್ದಾರಿಯಿಂದ ಅಂಗಡಿ ತೆರೆಯಬೇಕು ಎಂದರು.

ತುಮಕೂರು ನಗರದಲ್ಲಿ ವೈನ್‌ಶಾಪ್‌ಗಳು ಹಾಗೂ ಎಂಎಸ್‌ಐಎಲ್ ಅಂಗಡಿಗಳು ಬೆಳಗ್ಗೆ 9 ರಿಂದ ಸಂಜೆ 7ರವರೆಗೆ ತೆರೆಯಲು ಅನುಮತಿ ನೀಡಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಹಾಗೂ ಅಂಗಡಿಗಳ ಮುಂದೆ ಸಿಸಿ ಕ್ಯಾಮರಾ ಅಳವಡಿಸಬೇಕು. ಈ ಬಗ್ಗೆ ನಿಗಾ ವಹಿಸಬೇಕು ಎಂದು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿರುವ ಎರಡು ಕಂಟೇನ್ಮೆಂಟ್ ವಲಯ ಹೊರತುಪಡಿಸಿ ಅಂಗಡಿಗಳನ್ನು ಬೆಳಗ್ಗೆ 10 ರಿಂದ ರಾತ್ರಿ 7ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ.

ನಗರಕ್ಕೆ ನೇರ ಸಂಪರ್ಕಿಸುವ ರಸ್ತೆಗಳ ಮೂಲಕ ಬರುವ ಎಲ್ಲ ವಾಹನಗಳನ್ನು ತಪಾಸಣೆಗೊಳಪಡಿಸಲು ಅಗತ್ಯವಿರುವ ಕಡೆ ಚೆಕ್‌ಪೋಸ್ಟ್‌ಗಳನ್ನು ಕೂಡಲೇ ಸ್ಥಾಪಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು. ಜಿಮ್, ಶಾಪಿಂಗ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಫೂಲ್ ಹಾಗೂ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ಸರ್ಕಾರದ ಆದೇಶ ಮತ್ತು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ವರ್ತಕರು ಪಾಲಿಸಬೇಕು ಎಂದರು.

ಸಭೆಯಲ್ಲಿ ಹಾಜರಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಅವರಿಂದ ಸಡಿಲಿಕೆ ಕುರಿತು ಸಚಿವರು ಸಮಗ್ರ ಮಾಹಿತಿ ಪಡೆದರು.

ಜಿಪಂ ಸಿಇಒ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಡಿಎಚ್‌ಒ ಡಾ.ಚಂದ್ರಿಕಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಚಂದ್ರಶೇಖರ್, ಅಂಗಡಿಗಳ ಮಾಲೀಕರು, ವರ್ತಕರ ಸಂಘದ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ಸಂಚಾರಿ ಸ್ಕ್ವಾಡ್ ಹದ್ದಿನಕಣ್ಣು!: ದೈಹಿಕ ಅಂತರ ಕಾಯ್ದುಕೊಳ್ಳದೆ, ಜಿಲ್ಲಾಡಳಿತದ ಮಾರ್ಗಸೂಚಿ ಪಾಲಿಸದ ಅಂಗಡಿಗಳ ಮೇಲೆ ನಿಗಾವಹಿಸಲು 6 ಮೊಬೈಲ್ ಸ್ವ್ಕಾಡ್ ರಚಿಸಲಾಗಿದೆ. ಸದಾ ಗಸ್ತಿನಲ್ಲಿರುವ ಈ ತಂಡ ಅಂಗಡಿಗಳ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ. ಕೇಂದ್ರದ ಆದೇಶದಂತೆ ಕೋವಿಡ್-19 ನಿಯಂತ್ರಣಕ್ಕಾಗಿ ಮೇ 17ರವರೆಗೆ ಜಿಲ್ಲೆಯಲ್ಲಿಯೂ 144 ಸೆಕ್ಷನ್ ಜಾರಿಯಲ್ಲಿರುತ್ತದೆ.

ತುಮಕೂರು ನಗರದಲ್ಲಿ ವ್ಯಾಪಾರ, ವಹಿವಾಟು ನಡೆಸಲು ಷರತ್ತುಗಳನ್ನು ವಿಧಿಸಿ ಶುಕ್ರವಾರದಿಂದ ಅನುಮತಿ ನೀಡಲಾಗಿದೆ. ಜಿಲ್ಲಾಡಳಿತದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಲೇಬೇಕು, ವ್ಯಾಪಾರಕ್ಕಿಂದ ನಮಗೆ ಜನರ ಆರೋಗ್ಯ ಮುಖ್ಯ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ