ಮಾಗಡಿ: ಬೆನ್ಜ್ ಕಾರಿನಲ್ಲಿ ಬಂದು ಮನೆ ಕಳ್ಳತನ ಮಾಡಿ ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿರುವ ಮಾಗಡಿ ಉಪವಿಭಾಗ ಪೊಲೀಸರು, ಆರೋಪಿಗಳಿಂದ 3.40 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ದಾಸನಗುತ್ತಿ ಗ್ರಾಮದ ದಾಸನಗುತ್ತಿ ನಿವಾಸಿ ಸಾದಿಕ್ ಅಲಿಯಾಸ್ ಮೊಹಮ್ಮದ್ ಅರ್ಹಾನ್ ಚಂಗೂಲಿ (40) ಮತ್ತು ಶಿವಮೊಗ್ಗ ಜಿಲ್ಲೆ ಕಮ್ಮರಡಿ ಗ್ರಾಮದ ಹಂಜ ಅಲಿಯಾಸ್ ಮೊಹಮ್ಮದ್ ಶೈದ್ ಪೆರ್ಲೆ (39) ಬಂಧಿತರು.
ಆರೋಪಿಗಳು ಪಟ್ಟಣದ ಆರ್ಯವೈಶ್ಯ ಸಮುದಾಯದ ವೇಣುಗೋಪಾಲ್ ಅವರ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ಆಭರಣ ಮತ್ತು ಹಣ ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಮಾಗಡಿ ಠಾಣೆ ಇನ್‌ಸ್ಪೆಕ್ಟರ್ ಜಿ.ವೈ. ಗಿರಿರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ 4 ಕೆಜಿ 446 ಗ್ರಾಂ ಚಿನ್ನಾಭರಣ, 5 ಕೆಜಿ 434 ಗ್ರಾಂ ಬೆಳ್ಳಿ, 11.49 ಲಕ್ಷ ರೂ. ನಗದು, 1 ಪಿಸ್ತೂಲ್, 5 ಜೀವಂತ ಗುಂಡು, ಬೆನ್ಜ್ ಸೇರಿ 3 ಕಾರು ಸೇರಿದಂತೆ 3.60 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ರಾಮನಗರ ಜಿಲ್ಲಾ ಎಸ್‌ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಕುಖ್ಯಾತ ಕಳ್ಳರಾದ ಸಾದಿಕ್ ಮತ್ತು ಹಂಜ ಕಳ್ಳತನ ಎಸಗುವ ಸಲುವಾಗಿ ಕೇರಳದಲ್ಲಿ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದರು. ಇದೇ ಪಾಸ್‌ಪೋರ್ಟ್ ಬಳಸಿಕೊಂಡು 2 ಬಾರಿ ಬಹ್ರೇನ್‌ಗೆ ಹೋಗಿ ಬಂದಿದ್ದರು. ಬೆನ್ಜ್ ಕಾರಿನಲ್ಲಿ ಸುತ್ತಾಡಿ ದೊಡ್ಡ ದೊಡ್ಡ ಮನೆಗಳಿಗೆ ಬೀಗ ಹಾಕಿರುವುದನ್ನು ಟಾರ್ಗೆಟ್ ಮಾಡುತ್ತಿದ್ದರು. ರಾತ್ರಿ ವೇಳೆ ಒಳನುಗ್ಗಿ ಚಿನ್ನಾಭರಣ ದೋಚುತ್ತಿದ್ದರು. ಸೆ.22ರಂದು ಪಟ್ಟಣದ ಆರ್ಯವೈಶ್ಯ ಸಮುದಾಯದ ವೇಣುಗೋಪಾಲ್ ಎಂಬುವರ ಮನೆಯಲ್ಲೂ ಕಳವು ಮಾಡಿದ್ದರು. ತನಿಖೆ ಸಲುವಾಗಿ ಮಾಗಡಿ ಉಪವಿಭಾಗದ 4 ತಂಡಗಳನ್ನು ರಚಿಸಲಾಗಿತ್ತು.
ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಬಂಧನಕ್ಕೆ ಇನ್‌ಸ್ಪೆಕ್ಟರ್ ಜಿ.ವೈ. ಗಿರಿರಾಜ್ ನೇತೃತ್ವದ ತಂಡ ಮುಂಬೈಗೆ ಹೋಗಿ ಆರೋಪಿಗಳ ಬಂಧನಕ್ಕೆ 10 ದಿನಗಳ ಕಾಲ ಕಾರ್ಯಾಚರಣೆ ಕೈಗೊಂಡಿತ್ತು. ಕೊನೆಗೆ ಬಹ್ರೇನ್‌ಗೆ ಹೋಗಲು ಅ.2ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ಇಬ್ಬರನ್ನು ವಶಕ್ಕೆ ಪಡೆದು ನಕಲಿ ಪಾಸ್‌ಪೋರ್ಟ್ ಜಪ್ತಿ ಮಾಡಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಆರೋಪಗಳ ದುಷ್ಕೃತ್ಯಗಳು ಬಯಲಾಗಿವೆ.
ಮಾಗಡಿ, ಕುದೂರು, ತಾವರೆಕೆರೆ, ಹಾವೇರಿ ಜಿಲ್ಲೆ ಬ್ಯಾಡಗಿ, ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ತುಮಕೂರು, ಚಿಕ್ಕಮಗಳೂರು, ಉಡುಪಿ, ಚಾಮರಾಜನಗರ, ಹಾಸನ, ವಿಜಯನಗರ, ಮೈಸೂರು, ಗದಗ ಮತ್ತು ಬೆಳಗಾವಿ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಎಸ್‌ಪಿ ಕಾರ್ತಿಕ್ ರೆಡ್ಡಿ, ಮಾಹಿತಿ ನೀಡಿದ್ದಾರೆ.
ಡಿವೈಎಸ್‌ಪಿಗಳಾದ ಟಿ.ವಿ ಸುರೇಶ್, ರಾಮಚಂದ್ರಯ್ಯ, ಪ್ರವೀಣ್, ಇನ್‌ಸ್ಪೆಕ್ಟರ್‌ಗಳಾದ ಜಿ.ವೈ ಗಿರಿರಾಜ್, ನವೀನ್, ಮೋಹನ್ ಕುಮಾರ್, ಮಂಜುನಾಥ ಹೂಗಾರ್ ನೇತೃತ್ವದ ತಂಡದ ಕಾರ್ಯಕ್ಕೆ ಶ್ಲಾಘನೆ ಸಹ ವ್ಯಕ್ತಪಡಿಸಿದ್ದಾರೆ.
ಕೃತ್ಯ ಎಸಗಿ ವಿದೇಶಕ್ಕೆ ಪರಾರಿ
ಬೆಂಗಳೂರು ಮತ್ತು ಕೇರಳದಲ್ಲಿ ನಕಲಿ ಹೆಸರಿನಲ್ಲಿ ತಲಾ 2 ಪಾಸ್ ಪೋರ್ಟ್ ಹೊಂದಿದ್ದಾರೆ. ಕೆಜಿ ಗಟ್ಟಲೆ ಚಿನ್ನಾಭರಣ ಕಳವು ಮಾಡಿದ ಮೇಲೆ ಕೇರಳ ಮತ್ತು ಕರ್ನಾಟಕದಲ್ಲಿ ವಿಲೇವಾರಿ ಮಾಡುತ್ತಿದ್ದರು. ಬಳಿಕ ನಕಲಿ ಪಾಸ್‌ಪೋರ್ಟ್ ಮೇಲೆ ಬಹ್ರೇನ್‌ಗೆ ಹೋಗಿ ವರ್ಷಗಟ್ಟಲೇ ನೆಲೆಸುತ್ತಿದ್ದರು. ಅಷ್ಟೊತ್ತಿಗೆ ಕಳ್ಳತನ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿಗಳ ಸುಳಿವು ಸಿಗದೆ ಇದ್ದಾಗ 3 ತಿಂಗಳಿಗೆ ಕೋರ್ಟ್‌ಗೆ ಬಿ ಅಥವಾ ಸಿ ರಿಪೋರ್ಟ್ ಹಾಕುತ್ತಿದ್ದರು. ಇದನ್ನು ಖಚಿತಪಡಿಸಿಕೊಂಡು ಆರೋಪಿಗಳು ಮತ್ತೆ ವಾಪಸ್ ಬಂದು ಕೃತ್ಯ ಎಸಗುತ್ತಿದ್ದರು.
ಹಳೆಯ ಪ್ರಕರಣಗಳಲ್ಲಿ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದು, ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಕೋರ್ಟ್‌ಗೆ ಹೆಬಿಯಸ್ ಕಾರ್ಪಸ್
ಆರೋಪಿಗಳು ನುರಿತ ಕಾನೂನು ತಜ್ಞರ ಸಂಪರ್ಕ ಹೊಂದಿದ್ದರು. ಅಪ್ಪಿತಪ್ಪಿ ಏನಾದರೂ ಪೊಲೀಸರ ಕೈಗೆ ಸೆರೆಸಿಕ್ಕರೇ ಅವರ ಕಾನೂನು ತಜ್ಞರ ತಂಡ ಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕುತ್ತಿದ್ದರು. ಇತ್ತ ಪೊಲೀಸರು ತನಿಖೆಗೆ ಸಾಧ್ಯವಾದಷ್ಟು ಅಡ್ಡಿ ಮಾಡಿತಪ್ಪಿಸಿಕೊಳ್ಳುತ್ತಿದ್ದರು. ಆರೋಪಿಗಳು ಬೆಂಗಳೂರಿನಲ್ಲಿ ಐಷರಾಮಿ ಮನೆ, ಆಸ್ತಿ, ಕಾರುಗಳನ್ನು ಹೊಂದಿದ್ದು, ಕುಟುಂಬದ ಜತೆ ನೆಲೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.