ಜಿಲ್ಲೆ

ಜನರ ದೂರುಗಳಿಗೆ ತಕ್ಷಣ ಸ್ಪಂದನೆ ಸಿಗಲಿ

ಬೆಳಗಾವಿ: ಚುನಾವಣಾ ಅಕ್ರಮಗಳ ಕುರಿತು ಸಿ-ವಿಜಿಲ್ ಮೂಲಕ ಬರುವ ಅಥವಾ ಸಾರ್ವಜನಿಕರು ನೀಡುವ ಯಾವುದೇ ದೂರುಗಳನ್ನು ನಿರ್ಲಕ್ಷ್ಯ ಮಾಡದೆ ತಕ್ಷಣ ಪರಿಶೀಲನೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿಕುಮಾರ್ ನಿರ್ದೇಶನ ನೀಡಿದರು.
 ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣಾಧಿಕಾರಿಗಳು, ವೆಚ್ಚ ವೀಕ್ಷಕರು ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮತದಾನ ದಿನಾಂಕ ಸಮೀಪಿಸುತ್ತಿರುವುದರಿಂದ ಅಕ್ರಮ ತಡೆಗೆ ತೀವ್ರ ನಿಗಾ ವಹಿಸಬೇಕು. ಯಾವುದೇ ದೂರು ಅಥವಾ ಮಾಹಿತಿ ಬಂದಾಗ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುವ ತಂಡಗಳು ಸದಾ ಜಾಗೃತರಾಗಿರಬೇಕು. ಎಫ್‌ಎಸ್‌ಟಿ ತಂಡಗಳು ತಮ್ಮ ವ್ಯಾಪ್ತಿಯಲ್ಲಿ ನಿತಂತರವಾಗಿ ಗಸ್ತು ಕೈಗೊಳ್ಳಬೇಕು ಎಂದು ತಿಳಿಸಿದರು.
 ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ತಮ್ಮ ದೈನಂದಿನ ತಪಾಸಣೆ ಇನ್ನಷ್ಟು ಹೆಚ್ಚಿಸುವ ಮೂಲಕ ಅಕ್ರಮಗಳ ಪತ್ತೆ ಮಾಡಬೇಕು. ಸಂದೇಹಾಸ್ಪದ ಬ್ಯಾಂಕ್ ವಹಿವಾಟು ಪರಿಶೀಲಿಸಬೇಕು. ಅದಲ್ಲದೆ ಆದಾಯ ತೆರಿಗೆ, ಅಬಕಾರಿ, ಪೊಲೀಸ್ ಮತ್ತಿತರ ತಂಡಗಳು ಕೂಡ ಚುನಾವಣಾ ಅಕ್ರಮಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದರು.
 ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು.
 ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಖರ್ಚು-ವೆಚ್ಚಗಳ ಮೇಲೆ ನಿಗಾ ವಹಿಸಲಾಗಿದ್ದು, ಅಕ್ರಮ ತಡೆಯುವ ನಿಟ್ಟಿನಲ್ಲಿ ಎಲ್ಲ ತಂಡಗಳು ಕಾರ್ಯಪ್ರವೃತ್ತಗೊಂಡಿವೆ ಎಂದರು.
 ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಎಸ್ಪಿ ಡಾ.ಭೀಮಾಶಂಕರ ಗುಳೇದ, ಬೆಳಗಾವಿ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಹರಕ್ರಿಪಾಲ್ ಖಟಾನಾ, ನರಸಿಂಗರಾವ್ ಬಿ., ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಎನ್.ಮೋಹನ ಕೃಷ್ಣಾ, ಅಂಕಿತ ತಿವಾರಿ, ಐಎಎಸ್ ಪ್ರೊಬೇಷನರಿ ಅಧಿಕಾರಿ ಶುಭಂ ಶುಕ್ಲಾ ಇದ್ದರು