ಇಂಡಿ ತಾಲೂಕಿನ ಲಚ್ಯಾಣದಲ್ಲಿ ಹಮ್ಮಿಕೊಂಡಿದ್ದ ಹನಿ ನೀರಾವರಿ ಪದ್ಧತಿಯಲ್ಲಿ ಕಬ್ಬು ನಾಟಿ ಪ್ರಾತ್ಯಕೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ಎಂ.ಆರ್​. ಪಾಟೀಲ, ಅಹಿರಸಂಗದ ಮಲ್ಲಿಕಾರ್ಜುನ ಶ್ರೀ, ಬಿ.ಕೆ. ಪಾಟೀಲ ಇತರರಿದ್ದರು. 
ಜಿಲ್ಲೆ

ಅಲ್ಪ ನೀರಿನಲ್ಲಿ ಉತ್ತಮ ಇಳುವರಿ ತೆಗೆಯಿರಿ

ಇಂಡಿ:  ಏರುತ್ತಿರುವ ತಾಪಮಾನದಿಂದ ಮಳೆ ಕಡಿಮೆಯಾಗಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಬುಧವಾರ ತಾಲೂಕಿನ ಲಚ್ಯಾಣದ ಶ್ರೀಮಂತ ಇಂಡಿ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ಹನಿ ನೀರಾವರಿ ಪದ್ಧತಿಯಲ್ಲಿ ಕಬ್ಬು ನಾಟಿ ಪ್ರಾತ್ಯಕೆಯಲ್ಲಿ ಮಾತನಾಡಿದ ಅವರು, ರೈತರು ಮಣ್ಣು ಮತ್ತು ನೀರಿನ ಮಹತ್ವ ಅರಿತು ಕೃಷಿ ಮಾಡಬೇಕು. ಕೃಷಿಯಲ್ಲಿ ಸಾಂಪ್ರದಾಯಿಕ ವಿಧಾನದ ಬದಲಾಯಿಸಿಕೊಂಡು ಅಲ್ಪ ನೀರಿನಲ್ಲಿ ಉತ್ತಮ ಇಳುವರಿಗೆ ತೆಗೆಯಬೇಕು. ಇದಕ್ಕೆ ತುಂತುರು ಹಾಗೂ ಹನಿ ನೀರಾವರಿ ಪದ್ಧತಿ ಪೂರಕ ಎಂದರು.

ಶಿರಶ್ಯಾಡ ಅಭಿನವ ಮುರಂದ್ರ ಶಿವಾಚಾರ್ಯರು ಮಾತನಾಡಿ, ನೀರಿನ ಸದುಪಯೋಗಕ್ಕೆ ಇಸ್ರೇಲ್​ ಮಾದರಿ ದೇಶವಾಗಿದೆ ಎಂದರು.

ಕವಿಕೆ ಮುಖ್ಯಸ್ಥ ಶಿವಶಂಕರಮೂರ್ತಿ ಎಂ. ಮಾತನಾಡಿ, ಭೂಮಿಗೆ ನೈಟ್ರೋಜನ್​ ಹಿಡಿದಿಡುವ ಶಕ್ತಿ ಇರುವುದಿಲ್ಲ. ಹೀಗಾಗಿ ಒಮ್ಮೆ ಕೊಟ್ಟ ನೈಟ್ರೋಜನ್​ ಕೇವಲ ಮೂರು ದಿನಗಳವರೆಗೆ ಮಾತ್ರ ಭೂಮಿಯಲ್ಲಿದ್ದು, ಬೆಳೆಗೆ ಲಭ್ಯವಾಗುತ್ತದೆ. ನಂತರ ಅದು ಆವಿಯಾಗಿ ಹೋಗುತ್ತದೆ. ಆದ್ದರಿಂದ ಸತತವಾಗಿ ಬೆಳೆಗೆ ನೈಟ್ರೋಜನ್​ ಪೂರೈಸಲು ಪ್ರತಿದಿನ ನೀರಿನ ಜೊತೆಗೆ ನಿಗದಿಯಾದ ಪ್ರಮಾಣದಲ್ಲಿ ಗೊಬ್ಬರ ಹಾಗೂ ಇನ್ನಿತರ ಔಷಧ ಮಿಶ್ರಮಾಡಿ ಪೂರೈಸಬೇಕು ಎಂದರು.

ಹನಿ ನೀರಾವರಿ ಅಳಡಿಸಿಕೊಳ್ಳುವುದು ಆರಂಭಿಕ ಹಂತದಲ್ಲಿ ದುಬಾರಿಯಾಗುತ್ತದೆ. ಆದರೆ ಕೂಲಿಗಳ ಅವಲಂಬಿಸದೆ ಐದಾರು ವರ್ಷ ನಿರಾಯಾಸವಾಗಿ ಕಬ್ಬು ಬೆಳೆಯಬಹುದು ಎಂದು ಪ್ರಗತಿಪರ ರೈತ ಶ್ರೀಮಂತ ಇಂಡಿ ಹೇಳಿದರು.

ತದೇವಾಡಿ ಮಹಾಂತೇಶ ಶಾಸ್ತ್ರಿಗಳು, ಭೀಮಾಶಂಕರ ಮುರಗುಂಡಿ ಮಾತನಾಡಿದರು. ಕಬ್ಬು ನಾಟಿ ಮಾಡುವ ಮೂಲಕ ಶಾಸಕ ಯಶವಂತರಾಯಗೌಡ ಪಾಟೀಲ ಗಮನ ಸೆಳೆದರು.

ಎಂ.ಆರ್​. ಪಾಟೀಲ, ಅಹಿರಸಂಗದ ಮಲ್ಲಿಕಾರ್ಜುನ ಶ್ರೀ, ಬಿ.ಕೆ. ಪಾಟೀಲ, ಯಶವಂತ ಬಿರಾದಾರ, ರೇವಗೊಂಡಪ್ಪ ಬಿರಾದಾರ, ಸುಭಾಷ ಇಂಡಿ, ಮಹಾದೇವ ಏವೂರ, ಎಚ್​.ಎಸ್​. ಪಾಟೀಲ, ವಿಶ್ವನಾಥ ಬಿರಾದಾರ (ಬರಡೊಲ), ಎಂಸಿ. ಧನಶೇಟಿ, ಈಶ್ವರ ಪಾಟೀಲ ಇದ್ದರು.