ಇಳಕಲ್ಲ(ಗ್ರಾ): ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ಸಾಧನೆಯ ಗುರಿ ತಲುಪಬೇಕು ಎಂದು ಶಹರ ಪೊಲೀಸ್ ಠಾಣೆ ಮಹಿಳಾ ಪಿಎಸ್‌ಐ ಎಸ್.ಆರ್. ನಾಯಕ ಹೇಳಿದರು.
ನಗರದ ದಾಸೋಹ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ, ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದಾಗಿ ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ಎಲ್ಲ ರಂಗದಲ್ಲಿಯೂ ಪುರುಷರಿಗಿಂತ ಮುಂಚೂಣಿಯಲ್ಲಿದ್ದಾರೆ. ಆದರೆ, ಕೆಲವರು ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಬದುಕನ್ನು ಅಸ್ಥಿರಗೊಳಿಸಿಕೊಳ್ಳುತ್ತಿದ್ದು, ಅನಾಮಿಕ ಯುವಕರ ಪ್ರೀತಿಯ ಮೋಹದ ಪಾಶಕ್ಕೆ ಸಿಲುಕಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಮಾತನಾಡಿ, ಇಂದು ಶಿಕ್ಷಣ ಇಲ್ಲದೆ ಹೆಣ್ಣಿನ ಬದುಕು ಪರಿಪೂರ್ಣವಾಗಲಾರದು. ಮಹಿಳೆ ಪ್ರಸ್ತುತ ಜಗತ್ತಿನಲ್ಲಿ ಸ್ವಾವಲಂಬಿಯಾಗಿ ಬದುಕಲು ಶಿಕ್ಷಣವೇ ಶಕ್ತಿ ಎಂದರು.
ಇಳಕಲ್ಲ ಸಹಕಾರಿ ಬ್ಯಾಂಕ್ ನಿರ್ದೇಶಕಿ ಲತಾ ಹೇರೂರ ಮಾತನಾಡಿ, ಮುಂದುವರಿದ ದೇಶಗಳಲ್ಲಿ ಮಹಿಳೆಯರಿಗೆ ಇರುವ ವಿಪುಲ ಅವಕಾಶಗಳು ಭಾರತದ ಮಹಿಳೆಯರಿಗೂ ಸಿಗುವಂತಾಗಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ,ಇಳಕಲ್ಲ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕಿ ಲತಾ ಹೇರೂರ, ನಗರ ಪೊಲೀಸ್ ಠಾಣೆ ಅಧಿಕಾರಿ ಎಸ್.ಆರ್. ನಾಯಕ, ಸಮಾಜ ಸೇವಕಿಯರಾದ ಬಸವರಾಜೇಶ್ವರಿ ಮೇರನಾಳ, ಕವಿತಾ ಚಟ್ಟೇರ, ತುಳಸಾಬಾಯಿ ಹುಬ್ಬಳ್ಳಿ, ದೀಪಾ ಕರವೀರಮಠ, ಪ್ರಗತಿಪರ ರೈತ ಮಹಿಳೆ ಮಮತಾ ಮರೋಳ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಶೈಕ್ಷಣಿಕ ರಂಗದಲ್ಲಿ ಸಾಧನೆ ತೋರಿದ ವಿದ್ಯಾರ್ಥಿನಿಗಳಾದ ಡಾ.ಐಶ್ವರ್ಯ ಅಂಗಡಿ, ಐಶ್ವರ್ಯ ಮಠ, ಅಮೃತಾ ಅಂಗಡಿ ಅವರನ್ನು ಪುರಸ್ಕರಿಸಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಂಠಿ ವೇದಿಕೆ ಅಧ್ಯಕ್ಷೆ ಮಹಾದೇವಿ ತೊಂತನಾಳ ಅಧ್ಯಕ್ಷತೆ ವಹಿಸಿದ್ದರು. ಶೈಲಾ ಪಟ್ಟಣಶೆಟ್ಟಿ, ಜ್ಯೋತಿ ಅಂಗಡಿ, ಶಿಲ್ಪಾ ಅಂಗಡಿ, ಅನುರಾಧಾ ಪಟ್ಟಣಶಟ್ಟಿ, ಮೀನಾಕ್ಷಿ ಗೋನಾಳ, ಉಮಾ ಅಂಗಡಿ, ಜಯಶ್ರೀ ನೀರಲಕೇರಿ, ಶೋಭಾ ಲವಳಸರ, ಅಕ್ಕಮ್ಮ ಕಕ್ಕಸಗೇರಿ, ಮೇಘಾ ಕಕ್ಕಸಗೇರಿ, ರಾಜೇಶ್ವರಿ ಅಂಗಡಿ, ಗೀತಾ ನಂದಾಪೂರ, ಕಮಲಾಕ್ಷಿ ಅಂಗಡಿ, ಗಿರಿಜಾ ಶೆಟ್ಟರ ಮತ್ತಿತರರಿದ್ದರು.