ಕೆ.ಆರ್.ನಗರ : ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು. ಆ ಮೂಲಕ ಓದಿದ ಶಾಲೆ, ಪಾಲಕರಿಗೆ ಉತ್ತಮ ಹೆಸರು ತರಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.
ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ವತಿದಿಂದ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ರೈತ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 55ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ವತಿಯಿಂದ ಕಳೆದ 22 ವರ್ಷಗಳಿಂದ ಎಲ್ಲ ಸಮಾಜದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪುರಸ್ಕರಿಸುತ್ತಿರುವುದು ಶ್ಲಾಘನೀಯ ವಿಚಾರ. ಕಾರ್ಯಕ್ರಮಕ್ಕೆ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಂಡು ಕಾರ್ಯಕ್ರಮ ಸಂಘಟಿಸುವುದು ಕಷ್ಟ. ಆದರೆ ಸಂಘಟಕ ರಾ.ಸುರೇಶ್ ಇದಕ್ಕೆ ಹೊರತಾಗಿ ಸರ್ವ ಜನಾಂಗದವರನ್ನು ತಾರತಮ್ಯ ಮಾಡದೆ ಇಂತಹ ಮಹತ್ವಪೂರ್ಣ ಕೆಲಸ ಮಾಡುತ್ತಿರುವುದು ಹೆಮ್ಮೆಪಡುವ ವಿಚಾರ ಎಂದರು.
ಪೊಲೀಸ್ ನಿರೀಕ್ಷಕ ಎಸ್.ಶಿವಪ್ರಕಾಶ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡಲು ನೆರವಾಗಬೇಕು. ಆರ್ಥಿಕವಾಗಿ ಸದೃಢರಾಗಿರುವವರು ಸಮಾಜದಲ್ಲಿ ಅವಕಾಶ ವಂಚಿತರನ್ನು ಗುರುತಿಸಿ ಉತ್ತೇಜನ ನೀಡಬೇಕು. ಯಾವುದೇ ಧರ್ಮ, ಜಾತಿ, ಪಕ್ಷ ಬೇಧವಿಲ್ಲದೆ ತಾಲೂಕಿನ ಎಲ್ಲ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಒಂದೆಡೆ ಸೇರಿಸಿ ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಜೀವಾ ಆರ್ಥೋಕೇರ್‌ನ ಮೂಳೆತಜ್ಞ ಡಾ.ಕೆ.ಆರ್.ಗೌತಮ್ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಅನೇಕ ವಿಷಯಗಳನ್ನು ತಿಳಿಸಿಕೊಟ್ಟರು. ಬಳಗದ ಅಧ್ಯಕ್ಷ ರಾ.ಸುರೇಶ್ ಸ್ವಾಗತ ಕೋರಿದರು. ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವೈದ್ಯ ಡಾ.ಪಿ.ಜನಾರ್ಧನಭಟ್, ಅಪರ ಸರ್ಕಾರಿ ವಕೀಲ ಕೆ.ಸಿ.ಹರೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು, ನಿರ್ದೇಶಕ ಸಿ.ಇ.ಉಮೇಶ್, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಶಾಫಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್‌ಖನೋಲಿ ಮತ್ತಿತರರು ಹಾಜರಿದ್ದರು.