ವಿಜಯವಾಣಿ ಸುದ್ದಿಜಾಲ ಹೊಸೂರು
ನಗರದ ಚಿನ್ನ ಏಳಸಗೆರಿ ಸಮೀಪದಲ್ಲಿರುವ ಅಂಬೇಡ್ಕರ್ ನಗರದಲ್ಲಿ ಬುಧವಾರ ಸಂಜೆ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂಡ ನಿವಾಸಿಗಳು ಅಸ್ಪಸ್ಥರಾಗಿದ್ದಾರೆ ಇದರಲ್ಲಿ 13 ಮಂದಿ ಪ್ರಜ್ಞಾಹೀನರಾಗಿದ್ದು ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಮಂಜುಳಾ (34), ಎಲ್ಲಮ್ಮ (66), ಮುನಿತಾಯಮ್ಮ (77), ರಾಮಕೃಷ್ಣನ್, ಗೋಪಾಲ್ (35) ಮತ್ತು ಅಶ್ವಿನಿ (14) ಸೇರಿ ಹಲವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲುಷಿತ ನೀರಿನ ಶಂಕೆ: ಅಂಬೇಡ್ಕರ್ ನಗರ ನಿವಾಸಿಗಳಿಗೆ ಸರಬರಾಜಾಗುವ ಕುಡಿವ ನೀರಿನೊಂದಿಗೆ ಮಲಿನ ನೀರು ಮಿಶ್ರಣಗೊಂಡಿರಬಹುದು ಎಂದು ಅರೋಗ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿನ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಹಲವರಿಗೆ ಹೊಟ್ಟೆನೋವು: ಅಂಬೇಡ್ಕರ್ ಬಡಾವಣೆಯಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. ಎಲ್ಲರೂ ಬಡ ಕೂಲಿಕಾರ್ಮಿಕರಾಗಿದ್ದು, ಪಾಲಿಕೆ ಸರಬರಾಜು ಮಾಡುವ ನೀರನ್ನೇ ಬಳಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಹಲವರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜತೆಗೆ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ಬಡಾವಣೆಯಲ್ಲಿ ಆಂತಕದ ವಾತಾವರಣ ನಿರ್ಮಾಣವಾಗಿದ್ದು, ಅರೋಗ್ಯ ಇಲಾಖೆ ಸೇರಿ ಪಾಲಿಕೆಯ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಯರ್ ಭೇಟಿ: ವಾಂತಿಯಾಗಿ ಆಸ್ಪತ್ರೆಗೆ ನಿವಾಸಿಗಳು ದಾಖಲಾದ ವಿಷಯ ತಿಳಿದ ಪಾಲಿಕೆ ಮೇಯರ್ ಸತ್ಯಾ ಹಾಗೂ ಅಧಿಕಾರಿಗಳು ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರಿಂದ ಮಾಹಿತಿ ಪಡೆಯ ಮೇಯರ್ ಪ್ರಕರಣಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ವತಿಯಿಂದ ರೋಗಿಗಳ ಚಿಕಿತ್ಸೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಬುಧವಾರ ಸಂಜೆ ವೇಳೆಗೆ ಬಡಾವಣೆಯಲ್ಲಿನ ಹಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಡಾವಣೆಯಲ್ಲಿ ಸ್ವಚ್ಛತೆ ಕೊರತೆ ಕಂಡುಬಂದಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮೇಯರ್ ಸತ್ಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೈದ್ಯಕೀಯ ತಪಾಸಣೆ: ಪಾಲಿಕೆ ಆರೋಗ್ಯಾಧಿಕಾರಿ ಪ್ರಭಾಕರನ್ ನೇತೃತ್ವದ ವೈದ್ಯಕೀಯ ತಂಡ ವೈದ್ಯಕೀಯ ಶಿಬಿರಗಳನ್ನು ಏರ್ಪಾಡು ಮಾಡಿದ್ದು, ಬಡಾವಣೆಯಲ್ಲಿನ ಜನರ ಆರೋಗ್ಯ ತಪಾಸಣೆ ಕೈಗೊಂಡಿದೆ. ಸಹಾಯಕ ಜಿಲ್ಲಾಧಿಕಾರಿ ಪ್ರಿಯಾಂಕಾ, ಪಾಲಿಕೆ ಆಯುಕ್ತೆ ಸ್ನೇಹಾ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಬಳಿಕ ಪ್ರಕರಣದ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಡಿಎಸ್‌ಪಿ ಬಾಬು ಪ್ರಶಾಂತ್ ಹಾಗೂ ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.