ಜಿಲ್ಲೆ

ಉದ್ಯೋಗ ಪಡೆದು ಯಶಸ್ಸು ಹೊಂದಲಿ

Gadag - Desk - Tippanna Avadoot

ದಾಂಡೇಲಿ: ನಗರದ ಅಂಬೇವಾಡಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ ಆಟೋಮೋಟಿವ್ ರಿಪೇರ್ ಪೇಂಟಿಂಗ್ ಕೋರ್ಸ್ ತರಬೇತಿ ಮುಕ್ತಾಯ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ವೆಸ್ಟ್​ಕೋಸ್ಟ್ ಪೇಪರ್ ಮಿಲ್​ನ ಸಿಎಸ್​ಆರ್ ಅನುದಾನದ ಪ್ರಾಯೋಜಕತ್ವದಲ್ಲಿ ನಡೆಸಿದ ಈ ತರಬೇತಿಯಲ್ಲಿ 30 ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ತರಬೇತಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟೆಡ್​ನ ಲಿಯಾಸನ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಘವೇಂದ್ರ ಜೆ. ಆರ್., ಮಾತನಾಡಿ, ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆದುಕೊಂಡು ಜೀವನದಲ್ಲಿ ಯಶಸ್ಸು ಹೊಂದಬೇಕು ಎಂದರು.

ಕೆನರಾ ಬ್ಯಾಂಕ್ ಆರ್​ಸೆಟಿ ಯೋಜನಾಧಿಕಾರಿಗಳಾದ ಮಹಾಬಲೇಶ್ವರ ನಾಯ್ಕ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳು ಬಾಹ್ಯ ಆಕರ್ಷಣೆಗೆ ತುತ್ತಾಗದೇ ಆಯ್ದುಕೊಂಡ ಜೀವನದ ಪಥದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಸ್ವಾವಲಂಬಿ ಬದುಕು ನಡೆಸಬೇಕು ಎಂದರು. ರಾಷ್ಟಿ›ೕಯ ಕೌಶಲಾಭಿವೃದ್ಧಿ ಕೇಂದ್ರದ ಉಪ ನಿರ್ದೇಶಕರಾದ ವಿಜೇತ ಸ್ವಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಹಕಾರವನ್ನು ಸ್ಮರಿಸಿ, ಸಾಮಾಜಿಕ ಕಳಕಳಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಅಧಿಕಾರಿ ಖಲೀಲ್ ಕುಲಕರ್ಣಿ ಇದ್ದರು.

ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಮನೋಹರ್ ಕಾನ್ಕತ್ರಿ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಪಡೆದ 30 ವಿದ್ಯಾರ್ಥಿಗಳನ್ನು ಬೆಂಗಳೂರಿನ ಎಕ್ಸೋನೋಬಲ್ ಪೇಂಟ್ಸ್ ಲಿಮಿಟೆಡ್​ಗೆ 15 ದಿನದ ಉಚಿತ ಉನ್ನತ ತರಬೇತಿ ನೀಡಿ ಆನಂತರ ಉದ್ಯೋಗಾವಕಾಶ ಒದಗಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.