ಎಚ್.ಡಿ.ಕೋಟೆ ಪಟ್ಟಣದ ಶಾಂತಿಪುರದಲ್ಲಿರುವ ತಂಬಾಕು ಮಾರುಕಟ್ಟೆ ಪ್ಲಾಟ್‌ಫಾರಂ 65 ರಲ್ಲಿ ತಂಬಾಕು ಹರಾಜಿಗೆ ಚಾಲನೆ ಶಾಸಕ ಅನಿಲ್ ಕುಮಾರ್ ಚಾಲನೆ ನೀಡಿದರು. ಎಚ್.ವಿ.ವಿಜಯಕುಮಾರ್, ಮೊತ್ತ ಬಸವರಾಜಪ್ಪ, ಬಿ.ವಿ.ಬಸವರಾಜು, ಕೆಂಡಗಣ್ಣಸ್ವಾಮಿ, ಶಿವರಾಜಪ್ಪ, ಆನಂದ, ವಡ್ಡರಗುಡಿ ಬಸವರಾಜು ಇತರರು ಇದ್ದರು. 
ಜಿಲ್ಲೆ

ತಂಬಾಕಿಗೆ ಉತ್ತಮ ಬೆಲೆ ಸಿಗಲಿ

ವಸಂತಕುಮಾರ್ ಬಿ

ಎಚ್.ಡಿ.ಕೋಟೆ: ಮೈಸೂರು ಭಾಗದಲ್ಲಿ ಬೆಳೆದ ತಂಬಾಕು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಈ ತಂಬಾಕಿಗೆ ಉತ್ತಮ ಬೆಲೆ ನೀಡಬೇಕು ಎಂದು ಶಾಸಕ ಅನಿಲ್ ಕುಮಾರ್ ಒತ್ತಾಯಿಸಿದರು.

ಪಟ್ಟಣದ ಶಾಂತಿಪುರದಲ್ಲಿರುವ ತಂಬಾಕು ಮಾರುಕಟ್ಟೆ ಪ್ಲಾಟ್ ಫಾರ್ಮ್ 65ರಲ್ಲಿ ಬುಧವಾರ ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಮೈಸೂರು ಭಾಗದಲ್ಲಿ ಉತ್ಕೃಷ್ಟವಾದ ತಂಬಾಕು ಬೆಳೆಯಲಾಗುತ್ತಿದೆ ಎಂದು ವರದಿ ಇದೆ. ಆದರೆ ಕೆಲವೊಮ್ಮೆ ಈ ತಂಬಾಕಿಗೆ ಸರಿಯಾದ ದರ ನೀಡುತ್ತಿಲ್ಲ ಎಂದು ನಮ್ಮ ರೈತರು ದೂರುತ್ತಾರೆ. ಈ ಬಾರಿ ಉತ್ತಮ ಗುಣಮಟ್ಟದ ತಂಬಾಕಿಗೆ ಉತ್ತಮ ದರವೇ ದೊರೆಯಬೇಕು. ಅದಕ್ಕೆ ತಂಬಾಕು ಮಂಡಳಿ ಸದಸ್ಯರು ರೈತರು ಮತ್ತು ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಬೆಲೆ ದೊರೆಯುವಂತೆ ಕ್ರಮ ವಹಿಸಬೇಕು ಎಂದರು.

ತಂಬಾಕು ಮಂಡಳಿ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಕಳೆದ ಬಾರಿ ಒಂದು ಕೆ.ಜಿ. ತಂಬಾಕು 361ರೂ. ಮಾರಾಟವಾಗಿತ್ತು. ಈ ಬಾರಿ ಮೊದಲ ಬಿಡ್‌ನಲ್ಲಿ 320 ರೂ.ಗೆ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.

ಈ ಬಾರಿ ರೈತರು ಸುಮಾರು 8 ಮಿಲಿಯನ್ ತಂಬಾಕು ಬೆಳೆಯುವ ನಿರೀಕ್ಷೆಯಿದೆ. ಕಳೆದ ಬಾರಿ 8.37 ಮಿಲಿಯನ್ ತಂಬಾಕನ್ನು ರೈತರು ಬೆಳೆದು ಮಾರಾಟ ಮಾಡಿದ್ದರು. ಒಬ್ಬ ರೈತ 1.7 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಬೇಕು. ಅದೇ ರೀತಿ ತಾಲೂಕಿನಲ್ಲಿ ಈ ಬಾರಿ 7 ಸಾವಿರ ಹೆಕ್ಟೇರ್‌ನಲ್ಲಿ ತಂಬಾಕು ಬೆಳೆದಿದ್ದಾರೆ ಎಂದು ಮಾಹಿತಿ ನೀಡಿದರು.

ಒಬ್ಬ ಲೈಸನ್ಸ್‌ದಾರ ಅಗತ್ಯಕ್ಕಿಂತ ಹೆಚ್ಚು ತಂಬಾಕು ಬೆಳೆದರೆ ಮತ್ತು ಅನಧಿಕೃತ ಬೆಳೆಗಾರರಿಗೆ ಕಳೆದ ಎರಡು ವರ್ಷದಲ್ಲಿ ಯಾವುದೇ ದಂಡ ವಸೂಲಿ ಮಾಡಿರಲಿಲ್ಲ. ಆದರೆ ಈ ಬಾರಿ ದಂಡ ವಸೂಲಿ ಮಾಡಲು ಸರ್ಕಾರ ತೀರ್ಮಾನಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಕಳೆದ ಬಾರಿ ತಾಲೂಕಿನಲ್ಲಿ ತಂಬಾಕನ್ನು ಬೆಳೆಯುವ ಅಧಿಕೃತ ಬೆಳೆಗಾರರು 3845 ಜನರು ಮತ್ತು 4956 ಜನರು ಅನಧಿಕೃತ ಬೆಳೆಗಾರರಿದ್ದರು. ಅದೇ ರೀತಿ ಅಧಿಕೃತ 1217 ಬ್ಯಾರನ್ ಮತ್ತು ಅನಧಿಕೃತ 1651 ಬ್ಯಾರನ್‌ಗಳು ಇದ್ದವು. ಅಲ್ಲದೆ ಈ ಬಾರಿ ಅನಧಿಕೃತ ಬೆಳೆಗಾರರಿಗೆ ಆದಷ್ಟು ಬೇಗ ಕಾರ್ಡ್ ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಒಟ್ಟಾರೆಯಾಗಿ ಕಳೆದ ಸಾಲಿನಲ್ಲಿ 214.69 ರೂ. ಕೋಟಿ ಮೌಲ್ಯದ ತಂಬಾಕನ್ನು ಮಾರಾಟ ಮಾಡಲಾಗಿತ್ತು. ಈ ಸಾಲಿನಲ್ಲಿ ಆ ಪ್ರಮಾಣವನ್ನು ಹಿಂದಿಕ್ಕುವ ಎಲ್ಲ ಸೂಚನೆಗಳಿವೆ. ಆದ್ದರಿಂದ ಈ ಬಾರಿ ಉತ್ತಮ ದರ ದೊರೆಯುವ ಭರವಸೆ ಇದೆ ಎಂದು ರೈತರಿಗೆ ಮಾಹಿತಿ ನೀಡಿದರು.

ಬಳಿಕ ಇದೇ ವೇಳೆ ಶಾಸಕ ಅನಿಲ್ ಕುಮಾರ್ ತಂಬಾಕು ಮಂಡಳಿಯೊಳಗೆ ಕ್ಯಾಂಟೀನ್ ಸಹ ಉದ್ಘಾಟಿಸಿದರು. ಮಾರುಕಟ್ಟೆಯ ಮೇಲ್ವಿಚಾರಕ ಎಚ್.ವಿ. ವಿಜಯಕುಮಾರ್, ತಂಬಾಕು ಬೆಳೆಗಾರರಾದ ಮೊತ್ತ ಬಸವರಾಜಪ್ಪ, ಬಿ.ವಿ.ಬಸವರಾಜು, ಕೆಂಡಗಣ್ಣಸ್ವಾಮಿ, ಶಿವರಾಜಪ್ಪ, ಆನಂದ, ವಡ್ಡರಗುಡಿ ಬಸವರಾಜು, ಕಾಳೇಗೌಡ, ಮೇಟಿಕುಪ್ಪೆ ಚಂದ್ರಶೇಖರ್, ಸುರೇಶ್, ಗುರುಸ್ವಾಮಿ, ಮಾದರಾಜು, ಪೃಥ್ವಿ, ಪರಶಿವಮೂರ್ತಿ, ಸುದರ್ಶನ್, ಸತೀಶ್ ಇತರರು ಇದ್ದರು.